ದೇಶಪ್ರಮುಖ ಸುದ್ದಿ

ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ನೇಮಕ

ನವದೆಹಲಿ,ಜ.22-ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಅಚಲ್ ಕುಮಾರ್ ಜೋತಿ ಇಂದು (ಜ.22) ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ಓಂ ಪ್ರಕಾಶ್ ರಾವತ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಜ.23 ರಂದು ರಾವತ್ ಅಧಿಕಾರ ಸ್ವೀಕರಿಸಲಿದ್ದು, ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲಾವಾಸ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ರಾವತ್ ಅವರ ಅಧಿಕಾರ ಅವಧಿ ಈ ವರ್ಷದ ಡಿಸೆಂಬರ್ನಲ್ಲಿ ಅಂತ್ಯಗೊಳ್ಳಲಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ರಾವತ್ ಅವರ ಅಧಿಕಾರ ಅವಧಿ ಮುಕ್ತಾಯವಾದ ಬಳಿಕ ಹಿರಿಯ ಆಯುಕ್ತ ಸುನೀಲ್ ಅರೋರಾ ಚುನಾವಣಾ ಆಯೋಗದ ಮುಖ್ಯಸ್ಥರಾಗಲಿದ್ದಾರೆ. ಅರೋರಾ ಅವರು 2021ರಲ್ಲಿ ನಿವೃತ್ತರಾಗಲಿದ್ದಾರೆ. 2019ರ ಲೋಕಸಭೆ ಚುನಾವಣೆ ಉಸ್ತುವಾರಿಯನ್ನು ಅರೋರಾ ಅವರು ನಿರ್ವಹಿಸಲಿದ್ದಾರೆ.

ಮಧ್ಯಪ್ರದೇಶ ಕೇಡರ್ನ 1977ರ ಬ್ಯಾಚಿನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ರಾವತ್, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿ ಮತ್ತು ರಕ್ಷಣಾ ಸಚಿವಾಲಯದಲ್ಲಿ ನಿರ್ದೇಶಕ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿ ಬಾಬು ಲಾಲ್ ಗೌರ್ ಅವರ ಮುಖ್ಯ ಕಾರ್ಯದರ್ಶಿಯಾಗಿ 2004ರ ಹಾಗೂ 2006ರಲ್ಲಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಉತ್ತಮ ಆಡಳಿತಗಾರ ಎಂಬ ಶ್ಲಾಘನೆಯನ್ನು ನೀಡಿ ಪ್ರಧಾನಿ ಸಚಿವಾಲಯದಿಂದ ಗೌರವ ಸ್ವೀಕರಿಸಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: