ಪ್ರಮುಖ ಸುದ್ದಿಮೈಸೂರು

ಮೈಸೂರಿ‌ನ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ : ಬಿಎಸ್ ಯಡಿಯೂರಪ್ಪ ಗಂಭೀರ ಆರೋಪ

ಮೈಸೂರು,ಜ.22:- ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿದೆದರಿವೆ. ಪ್ರತಿಯೊಂದು ಪಕ್ಷವೂ ಜನರನ್ನು ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲವೂ ಜನರನ್ನು ತಲುಪಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಿಜೆಪಿಯ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ರ್ಯಾಲಿ ಮೈಸೂರು ಜಿಲ್ಲೆಯನ್ನು ತಲುಪಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಇಂದು ಮೈಸೂರು ಜಿಲ್ಲೆಗೆ ಪ್ರವೇಶಗೈದಿದ್ದು, ಇಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಲಿದೆ. ಮೈಸೂರಿನ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆಯಲಿದ್ದು, ಮೈಸೂರು ಜಿಲ್ಲೆಯ  ಹೆಚ್.ಡಿ.ಕೋಟೆ, ನಂಜನಗೂಡು, ಟಿ.ನರಸೀಪುರದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ನಾಳೆ, ನಾಳಿದ್ದು ಸಹ ಮೈಸೂರಿನಲ್ಲಿ ನಡೆಯಲಿದೆ.

ಜನವರಿ 25ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಪರಿವರ್ತನಾ ರ್ಯಾಲಿ  ಆಯೋಜನೆಗೂ ಸಕಲ ಸಿದ್ಧತೆ ನಡೆದಿದೆ. ಅಂದಿನ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡ ಭಾಗಿಯಾಗಲಿದ್ದಾರೆ. ಸಿಎಂ ತವರು ಮೈಸೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜಾಗುತ್ತಿದೆ. ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಗೋಕುಲ್ ಗೋವರ್ಧನ್ ಮೇಲೆ ಪೊಲೀಸರ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ   ಬಿ.ಎಸ್ ವೈ  ಮೈಸೂರಿ‌ನ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಎಂದು ಗಂಭೀರವಾಗಿ ಆರೋಪಿಸಿದರಲ್ಲದೇ ಘಟನೆಯನ್ನು ಖಂಡಿಸಿದರು. ದೂರು ನೀಡಲು ಹೋದಲು ಹೋದ ನಮ್ಮ ಕಾರ್ಯಕರ್ತರಿಗೆ  ಥಳಿಸಲಾಗಿದೆ.  ನಜರ್ ಬಾದ್ ಠಾಣೆ ಸಬ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದ್ದಾರೆ. ಎನ್ ಕೌಂಟರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾವು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡುತ್ತೇವೆ. ಅವರನ್ನು ಸರ್ಕಾರ ಕೂಡಲೇ ಅಮಾನತಿನಲ್ಲಿ ಇಡಬೇಕು ಎಂದು ಆಗ್ರಹಿಸಿದರು. 25ರ ಕರ್ನಾಟಕ ಬಂದ್ ಅವಶ್ಯಕತೆ ಇಲ್ಲ. ಮೈಸೂರು ಭಾಗಕ್ಕೂ ಮಹಾದಾಯಿ ಬಂದ್‌ಗೂ ಏನು ಸಂಬಂಧ.

ಎಂದು ಬಂದ್ ಕರೆ ನೀಡಿದವರನ್ನು ಪ್ರಶ್ನಿಸಿದರು. ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಬಂದ್ ಇದು. ಅವರಾಗಿಯೇ ಅವರು ಬಸ್ ನಿಲ್ಲಿಸಿ ಕಿತಾಪತಿ ಮಾಡುತ್ತಿದ್ದಾರೆ. 25ರ ಬಿಜೆಪಿ ಪರಿವರ್ತನಾ ಸಮಾವೇಶ ನಡೆದೇ ನಡೆಯುತ್ತೆ. ಬಂದ್‌ಗೆ ಬಿಜೆಪಿಯ ಬೆಂಬಲ ಇದೆ ಎಂದು ಹೇಳಲ್ಲ‌. ಆದರೆ ಮಹಾದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಿಜವಾಗಿಯೂ ಹೋರಾಟದ ಅನಿವಾರ್ಯ ಇರೋದು ಕಾಂಗ್ರೆಸ್ ವಿರುದ್ದ. ನೀರು ಕೊಡುತ್ತೇವೆಂದು ಗೋವಾ ಸಿಎಂ ಹೇಳಿದ್ದಾರೆ. ಅದಕ್ಕೆ ಅಲ್ಲಿನ ಕಾಂಗ್ರೆಸ್ ವಿರೋಧ ಇದೆ. ಇದರ ವಿರುದ್ದ ಕಾಂಗ್ರೆಸ್ ಯಾಕೇ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಮಹದಾಯಿ ವಿವಾದ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ.ಏಕೆಂದರೆ ಗೋವಾದಿಂದ ಕರ್ನಾಟಕಕ್ಕೆ ನೀರು ಬಿಡುವುದು ಅವರಿಗೆ ಇಷ್ಟವಿಲ್ಲ.ಸಮಸ್ಯೆ ಬಗೆಹರಿಯುವುದು ಅವರಿಗೆ ಬೇಕಾಗಿಲ್ಲ. ಅದೇ ಕಾರಣದಿಂದ  ವಿವಾದವನ್ನು ಜೀವಂತವಾಗಿಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹರಿಹಾಯ್ದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಕೋಟೆ ಶಿವಣ್ಣ, ಡಾ.ಬಿ.ಮಂಜುನಾಥ್ ಮತ್ತಿತರರು ಯಡಿಯೂರಪ್ಪ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: