ಕರ್ನಾಟಕ

ಮಹದಾಯಿ ವಿವಾದ; ಫೆ 4 ರಂದು ನೀಡಲಾಗಿರುವ ಬೆಂಗಳೂರು ಬಂದ್ ಕರೆ ಕಾಂಗ್ರೆಸ್ ಪ್ರಾಯೋಜಿತ : ಜಗದೀಶ ಶೆಟ್ಟರ್

ರಾಜ್ಯ(ಹುಬ್ಬಳ್ಳಿ)ಜ.22:- ಮಹದಾಯಿ ವಿವಾದ ಬಗೆಹರಿಸುವಂತೆ ಒತ್ತಾಯಿಸುವ ಹೆಸರಿನಲ್ಲಿ ಇದೇ ಫೆ 4 ರಂದು ನೀಡಲಾಗಿರುವ ಬೆಂಗಳೂರು ಬಂದ್ ಕರೆ ಕಾಂಗ್ರೆಸ್ ಪ್ರಾಯೋಜಿತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಕಿಡಿಕಾರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬರುವ ದಿನವಾದ ಫೆ. 4 ರಂದು ಬಂದ್ ಕರೆ ನೀಡಿರುವುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜಕೀಯ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ ಎಂದು ಕಟಕಿಯಾಡಿದರು. ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ವಿಫಲಗೊಳಿಸುವ ಯತ್ನವಿದಾಗಿದ್ದು, ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ಕೀಳು ರಾಜಕೀಯ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಇಂಥ ನೀತಿ ಅನುಸರಿಸಿದರೆ ಸುಮ್ಮನೆ ಕೈಕಟ್ಟಿ ಕೂಡಲಾಗದು ಎಂದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಬಂದಾಗ ನಾವು ಹೀಗೆ ಮಾಡಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದರು.

ಮಹದಾಯಿ ಕುರಿತಂತೆ ಏನೆಲ್ಲಾ ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಅವರು ವಿನಾಕಾರಣ ಪ್ರಧಾನಿ ಮೋದಿ ಅವರತ್ತ ಬೊಟ್ಟು ಮಾಡುತ್ತಿರುವುದು ತಪ್ಪು ಎಂದರು. ಮಹದಾಯಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಗೋವಾದಲ್ಲಿನ ತಮ್ಮ ಪಕ್ಷದ ನಾಯಕರನ್ನು ಒಪ್ಪಿಸಲು ಕಾಂಗ್ರೆಸ್ ಮೊದಲು ಮುಂದಾಗಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದರಾದ ಪ್ರಲ್ಹಾದ ಜೋಶಿ, ಮಾಜಿ ಸಚಿವರಾದ ಎಸ್.ಆರ್. ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ.ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: