ಕರ್ನಾಟಕ

ಶ್ರೀ ಬನಶಂಕರಿ ದೇವಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 50ಕ್ಕೂ ಹೆಚ್ಚು ಹೊಸ ಜೋಡಿಗಳು

ರಾಜ್ಯ(ಬೆಂಗಳೂರು)ಜ.22:- ನಗರದ ಕನಕಪುರ ಮುಖ್ಯರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಿಯ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಹೊಸ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಆಶ್ರಯದಲ್ಲಿ ನಡೆದ 19ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ಬೆಂಗಳೂರು ನಗರ, ನಗರ ಜಿಲ್ಲೆ ಗ್ರಾಮಾಂತರ ಜಿಲ್ಲೆ, ವಿವಿಧ ಜಿಲ್ಲೆಗಳು ಹಾಗೂ ನೇರ ರಾಜ್ಯಗಳಿಂದ ಆಗಮಿಸಿದ್ದ ನವ ಜೋಡಿಗಳಿಗೆ ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಶುಭಲಗ್ನದಲ್ಲಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.

ನೂತನ ವಧುವರರಿಗೆ ಆಶೀವರ್ಚನ ನೀಡಿದ ಅವರು ಈ ವಿವಾಹ ಕಾರ್ಯಕ್ರಮದಲ್ಲಿ ಜಾತಿ ಧರ್ಮ, ಭೇದ ಭಾವವಿಲ್ಲದೆ ಎಲ್ಲ ವರ್ಗದ ಜೋಡಿಗಳು ವಿವಾಹವಾಗುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸಮಾಜದಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಜೋಡಿಗಳು ವಿವಾಹವಾಗುತ್ತಾರೆ. ಅಲ್ಲಿ ಅಂತರ್ಜಾತಿಯ ವಿವಾಹಗಳು ನಡೆಯುವುದಿಲ್ಲ. ಆದರೆ ಈ ವಿವಾಹ ಸಮಾರಂಭ ಭಿನ್ನವಾಗಿ ನಿಲ್ಲಲಿದೆ ಎಂದು ಹೇಳಿದರು. ಉಚಿತ ವಿವಾಹದ ಹೆಸರಿನಲ್ಲಿ ಕೆಲವರು ತಮ್ಮ ವೈಯಕ್ತಿಕ ಲಾಭಮಾಡಿಕೊಂಡ ಹಲವು ನಿರ್ದಶನಗಳಿವೆ ಎಂದ ಶ್ರೀಗಳು ಕುಟುಂಬ ಎನ್ನುವುದು ಅನಾಗರೀಕ ಮನಸ್ಸುಗಳನ್ನು ಒಂದು ಮಾಡುವುದು ಎಂದರ್ಥ. ನಾಗರೀಕ ಸಮುದಾಯಕ್ಕೆ ತಳಹದಿ ನೀಡಿದ್ದೇ ಈ ಕುಟುಂಬ ವ್ಯವಸ್ಥೆ ಎಂದು ಹೇಳಿದರು. ಯಾವುದೇ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ ಎದುರಾದಾಗ ದಂಪತಿಗಳು ಧೃತಿಗೆಡಬಾರದು. ದಂಪತಿಗಳ ನಡುವೆ ರಹಸ್ಯ ಇರಬಾರದು. 1 ಇಲ್ಲವೇ 2 ಮಕ್ಕಳು ಸಾಕು, ಹೆಣ್ಣು ಮಗು ಹುಟ್ಟಿತೆಂದು ಆ ಮಗುವಿನ ಮೇಲೆ ತಾತ್ಸಾರ ಸಲ್ಲದು. ಸಿರಿವಂತರು, ಕೂಡ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಬಂಧನಕ್ಕೆ ಒಳಗಾಗಬೇಕು ಎಂದು ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ ಸರಳ ವಿವಾಹಗಳು ಸಮಾಜದಲ್ಲಿ ದೊಡ್ಡ ಪರಿವರ್ತನೆಯನ್ನೇ ಉಂಟುಮಾಡುತ್ತವೆ. ರಾಜ್ಯದಲ್ಲಿ ಇಂತಹ ಸರಳ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕೆಂದು ತಿಳಿಸಿದರು. ವಿವಾಹ ವೇದಿಕೆ ವ್ಯವಸ್ಥಾಪಕ ಎ.ಹೆಚ್. ಬಸವರಾಜು, ವಿಧಾನ ಪರಿಷತ್ ಸದಸ್ಯ ಟಿ.ಎಸ್.ಶರವಣ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಮಾಜಿ ಮೇಯರ್ ಎಸ್.ಕೆ.ನಟರಾಜ್, ಬನಶಂಕರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮಿ ಹಾಗೂ ವೇದಿಕೆಯ ಪದಾಧಿಕಾರಿಗಳಾದ ಜೆ.ದೇವರಾಜಲು, ಎಚ್.ಕೆ.ಮುತ್ತಪ್ಪ, ಜೆ.ಆರ್.ದಾಮೋದರ ನಾಯ್ಡು, ಎಸ್.ವಿದ್ಯಾ ಸಾಗರ್, ಜಿ.ಎಸ್.ಪ್ರಸನ್ನ ಕುಮಾರ್, ಆರ್.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: