
ದೇಶಪ್ರಮುಖ ಸುದ್ದಿ
ಪಾಟ್ನಾ-ಇಂದೋರ್ ರೈಲು ದುರಂತ-45 ಸಾವು; ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಕಾನ್ಪುರ: ಇಂದು ಬೆಳಗ್ಗೆ (ನ.20) ಪಾಟ್ನಾ-ಇಂದೋರ್ ಎಕ್ಸ್`ಪ್ರೆಸ್ ರೈಲಿನ 14 ಬೋಗಿಗಳು ಹಳಿತಪ್ಪಿ ದುರಂತ ಸಂಭವಿಸಿದೆ. ನಜ್ಜುಗುಜ್ಜಾದ ರೈಲಿನ ಬೋಗಿಗಳೊಳಗಿಂದ ಇದುವೆರೆಗೆ 45 ಜನರ ಶವ ಹೊರ ತೆರೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ಕಾನ್ಪುರ ಬಳಿಯ ಪುಖರಯನ್ ಪಟ್ಟಣದ ಸಮೀಪ ಬೆಳಗ್ಗೆ 3 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ರಕ್ಷಣಾ ತಂಡ ಮತ್ತು ವೈದ್ಯಕೀಯ ತಂಡಗಳು ದೌಡಾಯಿಸಿದ್ದು, ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಳ ಖುದ್ದು ಉಸ್ತುವಾರಿ ವಹಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಡಿಜಿಪಿಯವರಿಗೆ ಆದೇಶ ನೀಡಿದ್ದಾರೆ.
ಪ್ರಧಾನಿ ಸಂತಾಪ: ದುರಂತದ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಡಿದವರ ಕುಟುಂಬದ ನೋವು ತಮಗೆ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರೊಂದಿಗೆ ಮಾತನಾಡಿದ್ದು ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ತನಿಖೆಗೆ ಆದೇಶ: ರೈಲ್ವೇ ಸಚಿವ ಸುರೇಶ್ ಪ್ರಭು ಅವರು ದುರಂತರ ಕುರಿತು ತನಿಖೆಗೆ ಆದೇಶಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.