ಮೈಸೂರು

‘ಕೂಡಲ ಸಂಗಮ: ನೂರರ ಸಂಭ್ರಮ’ ದೃಶ್ಯರೂಪಕಕ್ಕೆ ಚಾಲನೆ

kalamandira-2ನಿರಂತರ ರಂಗತಂಡ ಪ್ರಸ್ತುತಪಡಿಸಿರುವ ಬಸವಣ್ಣನವರ ವಚನಗಳನ್ನಾಧರಿಸಿದ ದೃಶ್ಯ ರೂಪಕ ‘ಕೂಡಲ ಸಂಗಮ: ನೂರರ ಸಂಭ್ರಮ’ ಪ್ರದರ್ಶನಕ್ಕೆಶನಿವಾರ ಹಿರಿಯ ರಂಗಕರ್ಮಿ ಪ್ರಸನ್ನ ಹಾಗೂ ಸಂಸದ ಧ್ರುವನಾರಾಯಣ್ ಮಾವಿನ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಕರ್ನಾಟಕ ಕಲಾಮಂದಿರ ಸಭಾಂಗಣದಲ್ಲಿ ನಿರಂತರ ಫೌಂಡೇಶನ್ ವತಿಯಿಂದ ಪ್ರಸಾದ್ ಕುಂದೂರು ಅವರ ಸಾಹಿತ್ಯ, ವಿನ್ಯಾಸ ಮತ್ತು ಪರಿಕಲ್ಪನೆಯ, ಎಂ.ಎಂ. ಸುಗುಣ ನಿರ್ದೇಶನದ ಹಾಗೂ ಡಾ.ಸಿ. ಅಶ್ವಥ್ ಸಂಗೀತ ನಿರ್ದೇಶನ ಮಾಡಿರುವ ‘ಕೂಡಲ ಸಂಗಮ: ನೂರರ ಸಂಭ್ರಮ’ ದೃಶ್ಯರೂಪಕ ಚಾಲನೆ ಪಡೆಯಿತು.

ನಂತರ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಮಾತನಾಡಿ, ಕನ್ನಡ ರಂಗಭೂಮಿಗೆ ಕಳೆದ ಎರಡು ದಶಕಗಳಿಂದ ಪ್ರೇಕ್ಷಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇದು ರಂಗಭೂಮಿ ಬೆಳವಣಿಗೆಗೆ ಸಹಕಾರಿಯಾಗಿದೆ. ಟಿವಿ ಮಾಧ್ಯಮ ಜನರ ಕ್ರಿಯಾಶೀಲತೆಗೆ ಭಂಗ ತರುತ್ತಿದ್ದು, ಇದರಿಂದ ಮುಕ್ತಿ ಪಡೆಯಲು ಪ್ರೇಕ್ಷಕರು ಮತ್ತೆ ರಂಗಭೂಮಿ ಕ್ಷೇತ್ರದತ್ತ ಬರುತ್ತಿರುವುದು ಸಂತೋಷದ ವಿಚಾರ ಎಂದರು.

ರಂಗಭೂಮಿಗೆ ಯುವಕ-ಯುವತಿಯರನ್ನು ಕರೆತರುವಲ್ಲಿ “ನಿರಂತರ” ರಂಗತಂಡ ಯಶಸ್ವಿಯಾಗಿದೆ. “ಕೂಡಲ ಸಂಗಮ: ನೂರರ ಸಂಭ್ರಮ” ಪ್ರದರ್ಶನಕ್ಕೆ ಸೇರಿರುವ ಜನಸಾಗರವೇ ಸಾಕ್ಷಿ. ಈ ಸಂಭ್ರಮ ಇನ್ನು ಮುಂದುವರಿದು ರಂಗಭೂಮಿಗೆ ಮತ್ತಷ್ಟು ಯುವ ಕಲಾವಿದರನ್ನು ಕರೆತಂದು ಸಮಾಜಕ್ಕೆ ಪರಿಚಯಿಸಲಿ ಎಂದು ಆಶಿಸಿದರು.

ಸಂಸದ ಧ್ರುವನಾರಾಯಣ್ ಮಾತನಾಡಿ, ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಅಸಮಾನತೆ, ಮೌಢ್ಯಗಳ ವಿರುದ್ಧ ಹೋರಾಡಿದ ಮಹಾ ಪುರುಷರು. ಇವರು ಸಮಾಜ ಸುಧಾರಣೆಗಾಗಿ ಅಂತರ್‍ ಜಾತಿ ವಿವಾಹ, ಕಾಯಕದ ಮಹತ್ವ ಹಾಗೂ ದಾಸೋಹ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. ವಚನ ಚಳವಳಿ ಮೂಲಕ ಸಮಾಜದಲ್ಲಿನ ಮೌಢ್ಯ, ಅಸಮಾನತೆ, ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಸಮಾಜ ಸುಧಾರಣೆಗೆ ಶ್ರಮಿಸಿದ್ದರು ಎಂದರು.

ಕನ್ನಡ ಪರ ಹೋರಾಟಗಾರ ಪ. ಮಲ್ಲೇಶ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಕಲಾವಿದ ಪ್ರಸಾದ್ ಕುಂದೂರು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ. ರಾಮಚಂದ್ರ, ಹಸಿರು ಫೌಂಡೇಶನ್ ಹೊನ್ಗಳ್ಳಿ ಗಂಗಾಧರ್ ಉಪಸ್ಥಿತರಿದ್ದರು.

kalamandira-3

Leave a Reply

comments

Related Articles

error: