ಮೈಸೂರು

ವಕೀಲರ ಮೇಲಿನ ಹಲ್ಲೆಗೆ ಖಂಡನೆ : ಪೊಲೀಸರ ಅಮಾನತಿಗೆ ವಕೀಲರ ಆಗ್ರಹ

ಮೈಸೂರು,ಜ.23:- ಪೊಲೀಸ್ ಠಾಣೆಗೆ ದೂರು ನೀಡಲು ಹೋದ ವಕೀಲರ ಮೇಲೆ ಹಲ್ಲೆ ನಡೆಸಿ, ಬಂಧಿಸಿ ಅವರ ಮೇಲೆಯೇ ಪ್ರಕರಣ ದಾಖಲಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಿತಲ್ಲದೇ, ನಜರ್ ಬಾದ್ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ವಕೀಲ ಗೋಕುಲ್ ಗೋವರ್ಧನ್ ನಜರ್ ಬಾದ್ ಠಾಣೆಗೆ ದೂರು ನೀಡಲು ತೆರಳಿದ ವೇಳೆ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರು, ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದರ ವಿರುದ್ಧ ಮೈಸೂರು ವಕೀಲರು ಕಲಾಪವನ್ನು ಬಹಿಷ್ಕರಿಸಿದರಲ್ಲದೇ, ಆಕ್ರೋಶ ವ್ಯಕ್ತಪಡಿಸಿ ನಜರ್ ಬಾದ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ನಜರ್ ಬಾದ್ ಠಾಣೆಯ ಪೊಲೀಸರ ಮೇಲೆಯೂ ಪ್ರಕರಣ ದಾಖಲಿಸಿ, ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು.

ನಜರ್ ಬಾದ್ ಠಾಣೆಯ ಪೊಲೀಸರು ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ವಕೀಲರುಗಳು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ವಕೀಲರ ಸಂಘದ ಅಧ್ಯಕ್ಷ ರಾಮಮೂರ್ತಿ ನೇತೃತ್ವದಲ್ಲಿ ಸಹಸ್ರಾರು ವಕೀಲರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: