ಮೈಸೂರು

ಸಿಎಂ ಸಿದ್ದರಾಮಯ್ಯ – ಶಾಸಕ ವಾಸು ಅವರಿಗೆ ಸನ್ಮಾನ

ಮಹಾರಾಣಿ ಕಾಲೇಜಿನ ಹಳೆ ಹಾಗೂ ಹೊಸ ವಿದ್ಯಾರ್ಥಿಗಳಿಂದ ಅಭಿನಂದನೆ

ಮೈಸೂರು, ಜ. 23 : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಶಾಸಕ ವಾಸು ಅವರ ತವರು ಕ್ಷೇತ್ರದ ಮೇಲಿರುವ ವಿಶೇಷ ಕಾಳಜಿಯಿಂದಾಗಿ ಸುಮಾರು 174 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ನಗರದಲ್ಲಿ ಸುಸಜ್ಜಿತ ಮಹಾರಾಣಿ ಕಾಲೇಜು ಕಟ್ಟಡ ನಿರ್ಮಾಣವಾಗಿರುವುದು ಶ್ಲಾಘನೀಯ, ಅದರ ಉದ್ಘಾಟನೆ ದಿನದಂದು ಹಳೆ ಹಾಗೂ ಹೊಸ ವಿದ್ಯಾರ್ಥಿಗಳ ಸಂಘದಿಂದ ಅವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದರು.

ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಮಂಜುಳಾ ಮಾನಸ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಪಡುವಾರಳ್ಳಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ನೂತನ ಮಹಾರಾಣಿ ಕಾಲೇಜಿನ ಕಟ್ಟಡವನ್ನು ನಾಳೆ ಜ.24ರ ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರವಾಗಿ ಸಿಎಂ ಹಾಗೂ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಹೇಳಿದರು.

ಮಹಾರಾಣಿ ಕಾಲೇಜಿನ ನೂತನ ಕಟ್ಟಡದ ಶಂಕುಸ್ಥಾಪನೆ, ಕಾಮಗಾರಿಗೆ ಬಜೆಟ್ ಹಾಗೂ ಉದ್ಘಾಟನೆಯು ಸಿಎಂ ಸಿದ್ದರಾಮ್ಯಯನವರ ಅವರಿಂದಲೇ ನಡೆದಿರುವುದು ಹರ್ಷದಾಯಕ ಎಂದ ಅವರು, 1990ರ ಅವಧಿಯಲ್ಲಿ ಮಹಾರಾಣಿ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಯಾತನೆಯನ್ನು ಬಿಡಿಸಿ ಹೇಳಿ, ಇವೆಲ್ಲಕ್ಕೂ ಶಾಶ್ವತ ಪರಿಹಾರ ನೀಡಿದ ಸಿಎಂ ಹಾಗೂ ಶಾಸಕ ವಾಸು ಅವರ ಕಾಳಜಿಯನ್ನು ಸ್ಮರಿಸಿದರು.

ಕಾಲೇಜಿನ ಹಳೆ ಹಾಗೂ ಹೊಸ ವಿದ್ಯಾರ್ಥಿಗಳು 10 ಗಂಟೆಯೊಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ವಾಸು ಅವರಿಗೆ ಸನ್ಮಾನಿಸಿ ಅಭಿನಂದಿಸೋಣ ಎಂದು ಕರೆ ನೀಡಿದರು.

ಲೋಕೋಪಯೋಗಿ , ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು, ರಾಜ್ಯ ಆರೋಗ್ಯ ಪದ್ಧತಿ ಮತ್ತು ಸುಧಾರಣಾ ಯೋಜನಾ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಸೇರಿದಂತೆ ಮೈಸೂರು ನಗರ ವ್ಯಾಪ್ತಿಯಲ್ಲಿ ಸುಮಾರು 2052.37 ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವುದು ಮುಖ್ಯಮಂತ್ರಿಗಳಿಗೆ ಮೈಸೂರಿನ ಬಗ್ಗೆಯಿರುವ ಕಳಕಳಿಯೆಂದು ಹೊಗಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ : ನೂತನ ಮಹಾರಾಣಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕಾರಣೀಭೂತರಾದ ಸಿಎಂ ಹಾಗೂ ಶಾಸಕರನ್ನು ಮೈಸೂರು ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದಲೂ ಸನ್ಮಾನಿಸಲಾಗುವುದು ಎಂದು ಅಧ್ಯಕ್ಷ ನಂದಿನಿ ಚಂದ್ರಶೇಖರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರತ್ನ, ಶೋಭಾ, ತಾ.ಪಂ. ಸದಸ್ಯೆ ಗೀತಾ, ವಿಜಯಲಕ್ಷ್ಮೀ ಗೋಷ್ಠಿಯಲ್ಲಿ ಹಾಜರಿದ್ದರ. (ವರದಿ : ಕೆ.ಎಂ.ಆರ್)

Leave a Reply

comments

Related Articles

error: