ಪ್ರಮುಖ ಸುದ್ದಿಮೈಸೂರು

ನೋಟ್ ರದ್ದಾಗುವುದು ಬಿಜೆಪಿಯವರಿಗೆ ಗೊತ್ತಿತ್ತು ಎಂದು ಹೇಳುವವರು ಮೂರ್ಖರು: ಬಿಎಸ್‍ವೈ

500 ಮತ್ತು 1000 ರುಪಾಯಿ ನೋಟ್ ರದ್ದಾಗುವುದು ಬಿಜೆಪಿಯವರಿಗೆ ಮೊದಲೇ ಗೊತ್ತಿತ್ತು ಎಂದು ಹೇಳುವವರು ಮೂರ್ಖರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶನಿವಾರ ಮೈಸೂರಿಗೆ ಆಗಮಿಸಿದ ಅವರು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ನೋಟು ರದ್ದು ಮಾಡುವ ವಿಚಾರ ವಿತ್ತ ಸಚಿವರಿಗೂ ತಿಳಿದಿರಲಿಲ್ಲ. ಈ ಕ್ರಮದಿಂದಾಗಿ ಸುಮಾರು 17 ಲಕ್ಷ ಕೋಟಿ ಕಪ್ಪುಹಣ ಬೆಳಕಿಗೆ ಬರುತ್ತದೆ. ಶತ್ರು ರಾಷ್ಟ್ರಗಳಿಂದ ಬರುತ್ತಿದ್ದ ಖೋಟಾ ನೋಟುಗಳಿಗೆ ತಡೆ ಬೀಳುವುದರೊಂದಿಗೆ ಉಗ್ರಗಾಮಿಗಳ ಚಟುವಟಿಕೆಯೂ ತಗ್ಗಲಿದೆ. ಸದ್ಯಕ್ಕೆ ಸಾಮಾನ್ಯ ಜನರಿಗೆ ತೊಂದರೆಯಾಗಿದ್ದರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದಷ್ಟು ದಿನ ಸಹಕಾರ ನೀಡಿದರೆ ಕ್ರಾಂತಿಕಾರಕ ಬದಲಾವಣೆ ಕಾಣಬಹುದು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ರೈತರ ಸಂಕಷ್ಟ ಮತ್ತು ರಾಜ್ಯದಲ್ಲಿ ನೀರಿನ ಹಾಹಾಕಾರದ ವಿಷಯಕ್ಕೆ ಆದ್ಯತೆ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ಕಾರ್ಯಕ್ರಮವೊಂದರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ವಿಚಾರವಾಗಿ ಪ್ರತಿಕ್ರಯಿಸಿದ ಬಿಎಸ್‍ವೈ, ಬಿಜೆಪಿ ಶಾಸಕರ ಮೇಲೆ ಈ ರೀತಿಯ ಆರೋಪ ಕೇಳಿ ಬಂದಾಗ ಕೂಡಲೇ ರಾಜೀನಾಮೆ ಪಡೆದಿದ್ದೆವು. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಗೌರವ, ಸ್ವಾಭಿಮಾನವಿದ್ದರೆ ತನ್ವೀರ್ ಸೇಠ್ ಅವರಿಂದ ರಾಜೀನಾಮೆ ಪಡೆಯಬೇಕು. ಈ ಮೂಲಕ ಅಧಿವೇಶನದಲ್ಲಿ ಅನಗತ್ಯ ಚರ್ಚೆಯಾಗುವುದನ್ನು ತಪ್ಪಿಸಬೇಕೆಂದು ಹೇಳಿದರು.

ಮಾಜಿ ಸಚಿವ ಎಸ್.ಎ. ರಾಮದಾಸ್, ಸಿ.ಎಚ್. ವಿಜಯಶಂಕರ್, ಬಿಜೆಪಿ ನಗರಾಧ್ಯಕ್ಷ ಡಾ. ಮಂಜುನಾಥ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: