ಪ್ರಮುಖ ಸುದ್ದಿಮೈಸೂರು

ನೋಟು ನಿಷೇಧದಿಂದ ಸಾಮಾನ್ಯರಿಗೆ ತೊಂದರೆ: ಸಿಎಂ ಸಿದ್ದರಾಮಯ್ಯ

ಅಧಿಕ ಮೌಲ್ಯದ ನೋಟುಗಳನ್ನು ನಿಷೇಧಿಸಿ ಕಾಳಧನಿಕರ ನಿದ್ದೆಗೆಡಿಸುತ್ತೇವೆಂದು ಸಾಮಾನ್ಯ ಜನರ ನಿದ್ದೆ ಕಿತ್ತುಕೊಂಡಿದ್ದಾರೆ. ಈ ನೋಟು ಅಪಮೌಲ್ಯದ ಗೊಂದಲದಿಂದ ಈವರೆಗೂ 42 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಮೋದಿ ಯಾರ ನಿದ್ದೆಗೆಡಿಸಿದ್ದಾರೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನೋಟು ನಿಷೇಧವನ್ನು ವಿರೋಧಿಸುತ್ತಿಲ್ಲ. ಆದರೆ, ಪೂರ್ವ ಸಿದ್ಧತೆಯಿಲ್ಲದೆ ಸಾಮಾನ್ಯ ಜನರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಅಧಿಕ ಮೌಲ್ಯದ ನೋಟು ನಿಷೇಧ ಹಿನ್ನೆಲೆಯಲ್ಲಿ ಮೋದಲೇ 50,100, 500 ರು. ಮುಖಬೆಲೆಯ ನೋಟುಗಳನ್ನು ಮುಂಗಡವಾಗಿ ಮುದ್ರಿಸಿ ಬ್ಯಾಂಕುಗಳಿಗೆ ಸರಬರಾಜು ಮಾಡಬೇಕಿತ್ತು. ಈಗ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಉಂಟಾದ ಸಮಸ್ಯೆ ನಿವಾರಣೆಯಾಗಲು ಇನ್ನು ಆರು ತಿಂಗಳಾದರೂ ಬೇಕು ಎಂದು ಅಭಿಪ್ರಾಯಪಟ್ಟರು.

ಪೊಲೀಸ್ ಸಿಬ್ಬಂದಿಗೆ ಮಾಸಿಕ 2000 ರು. ಭತ್ಯೆ ಹೆಚ್ಚಳ ಮಾಡಿರುವುದರ ಬಗ್ಗೆ ಪೊಲೀಸರು ಸಮಾಧಾನಗೊಂಡಿಲ್ಲ ಎಂಬ ಮಾತುಗಳು ಕೇಳಿಬಂದಿವೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸದ್ಯಕ್ಕೆ ಇಷ್ಟು ಪರಿಹಾರ ನೀಡಿದ್ದೇವೆ. ಮುಂದಿನ ವರ್ಷ ವೇತನ ಆಯೋಗ ಮಾಡುತ್ತೇವೆ. ಆಗ ಎಲ್ಲ ಇಲಾಖೆಗಳ ಸಿಬ್ಬಂದಿಗೂ ವೇತನ ಪರಿಷ್ಕರಣೆ ಮಾಡಿದ್ದಂತೆ ಪೊಲೀಸ್ ಸಿಬ್ಬಂದಿಗೂ  ಮಾಡಲಾಗುತ್ತದೆ. ಇವರಿಗೆ ಮಾತ್ರ ಹೆಚ್ಚಳ ಮಾಡಲು ಬರುವುದಿಲ್ಲ. ಎಲ್ಲರಿಗೂ ನಿರೀಕ್ಷೆಗಳು ಇರುತ್ತವೆ ಎಂದರು.

ಹಿರಿಯ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮಂಜೂರು ಮಾಡಿರುವ ಜಮೀನಿನ ಬಗ್ಗೆ ವಿವಾದ ಉಂಟಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಜಿಲ್ಲಾಧಿಕಾರಿಗಳು ಈ ಸಂಬಂಧ ಗಮನಹರಿಸುತ್ತಾರೆ ಎಂದು ಹೇಳಿದರು.

ಮೂಡಾ ಅಧ್ಯಕ್ಷ ಧ್ರುವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಜಿಲ್ಲಾಧಿಕಾರಿ ರಂದೀಪ್, ನಗರ ಪೊಲೀಸ್ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್ ಹಾಜರಿದ್ದರು.

Leave a Reply

comments

Related Articles

error: