ಮೈಸೂರು

ಸಂಗೀತ ವಿವಿ ಶಾಖೆಗಳಲ್ಲಿ ನಾಲ್ಕು ವಿಶೇಷ ಕಾರ್ಯಕ್ರಮ

ಕರ್ನಾಟಕ ಸಂಗೀತ ಮತ್ತು ವಾದ್ಯಗಳು, ಹಿಂದುಸ್ತಾನಿ ಸಂಗೀತ ಮತ್ತು ವಾದ್ಯಗಳು ಭರತನಾಟ್ಯ ಮತ್ತು ನಾಟಕ ಕಲೆಗಳ ಅಧ್ಯಯನ ಶಾಖೆಗಳ ಅಡಿಯಲ್ಲಿ ಕರ್ನಾಟಕ ರಾಜ್ಯ ಡಾ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಲ್ಕು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವಿ ಕುಲಪತಿ ಡಾ.ಸರ್ವಮಂಗಳ ಶಂಕರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.22ರ ಮಧ್ಯಾಹ್ನ 1  ಗಂಟೆಗೆ  ವಿಶ್ವವಿದ್ಯಾಲಯದ ಕರ್ನಾಟಕ ಸಂಗೀತ ವಿಭಾಗದಿಂದ ಕರ್ನಾಟಕ ಸಂಗೀತದ ಪರಂಪರೆ ಮತ್ತು ನವ್ಯದೃಷ್ಠಿಕೋನ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ  ನಡೆಯಲಿದ್ದು, ನಿವೃತ್ತ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ವೈಣಿಕ ಡಾ.ರಾ.ವಿಶ್ವೇಶ್ವರನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಅದೇ ದಿನ ಸಂಜೆ ನಡೆಯುವ ಗೋಷ್ಠಿಗಳ ಅಧ್ಯಕ್ಷತೆಯನ್ನು ಡಾ. ಸಿ.ಎ.ಶ್ರೀಧರ್ ವಹಿಸಲಿದ್ದಾರೆ ಎಂದು ಹೇಳಿದರು.

ಕರ್ನಾಟಕ ಸಂಗೀತ ವಿಭಾಗ: ನ.22ರಂದು ಬೆಳಗ್ಗೆ 11 ಗಂಟೆಗೆ ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಸಂಗೀತಗಳ ವಿಭಿನ್ನ ನೆಲೆಗಳು ವಿಷಯ ಕುರಿತು ಡಾ.ಮೈಸೂರು ಎಂ.ಮಂಜುನಾಥ್,  ಕರ್ನಾಟಕ ಸಂಗೀತ ಪದ್ಧತಿಯ ರಾಗ-ತಾನ ವೈವಿಧ್ಯತೆ ವಿಷಯ ಕುರಿತು, ವಿದ್ವಾನ್ ಆರ್.ಕೆ. ಪದ್ಮನಾಭ, ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ನೆಲೆಗಟ್ಟಿನಲ್ಲಿ ನವ್ಯ ಪ್ರಕ್ರಿಯೆಗಳು ಎಂಬ ವಿಷಯ ಕುರಿತು ವಿದ್ವಾನ್ ಬಳ್ಳಾರಿ ಎಂ.ರಾಘವೇಂದ್ರ ಮತ್ತು ವೃಂದ ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ನೃತ್ಯದ ವಿವಿಧ ಆಯಾಮಗಳು: ನ.26 ರಂದು 10.30ಕ್ಕೆ ವಿಶ್ವವಿದ್ಯಾಲಯದ ಭರತನಾಟ್ಯ ವಿಭಾಗದ ವತಿಯಿಂದ ನೃತ್ಯದ ವಿವಿಧ ಆಯಾಮಗಳು ಎಂಬ ವಿಚಾರವಾಗಿ  ರಾಜ್ಯಮಟ್ಟದ ವಿಚಾರ ಸಂಕಿರಣ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದ್ದು,  ಅಷ್ಟ ನಾಯಕಿಯರು-ಒಂದು ವಿಶ್ಲೇಷಣೆ ಎಂಬ ವಿಷಯ ಕುರಿತು ಬೆಳಗ್ಗೆ 11  ಗಂಟೆಗೆ ಡಾ.ಆರ್.ಗಣೇಶ್ ಶತಾವಧಾನಿ ಉಪನ್ಯಾಸ ನೀಡಲಿದ್ದಾರೆ ಮತ್ತು  ಡಾ.ಶೋಭಾ ಶಶಿಕುಮಾರ್ ಮತ್ತು ವೃಂದದವರು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ಘರಾಣಾ ಉತ್ಸವ: ಡಿ.5ರಂದು ವಿಶ್ವವಿದ್ಯಾಲಯದ ಹಿಂದುಸ್ತಾನಿ ಸಂಗೀತ ಗಾಯನ ಹಾಗೂ ತಬಲ ವಿಭಾಗಗಳ ಸಹಯೋಗದಲ್ಲಿ ಘರಾಣಾ ಉತ್ಸವ ಎಂಬ ರಾಷ್ಟಮಟ್ಟದ ವಿಚಾರ ಸಂಕಿರಣವನ್ನು ಕುವೆಂಪು ನಗರದ ಗಾನಭಾರತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ವಾಲಿಯರ್ ಹಾಗೂ ಪಟಿಯಾಲಾ ಘರಾಣೆ ಹಾಗೂ ಠುಮ್ರಿಗಾಯನ ಶೈಲಿ ವಿಷಯ ಕುರಿತು ಡಾ. ಪಂ. ಅಜೇಯ ಪೊಹನಕರ್, ಕರ್ನಾಟಕದಲ್ಲಿ ತಬಲಾ ಕ್ಷೇತ್ರಕ್ಕೆ ಪಂ. ಬಸವರಾಜ ಬೆಂಡಿಗೇರಿಯವರ ಕೊಡುಗೆ ಹಾಗೂ ವಾದನ ಶೈಲಿ ವಿಷಯವನ್ನು ಕುರಿತು ಉಸ್ತಾದ್ ನಿಸ್ಸಾರ್‌ಅಹ್ಮದ್, ಪಂಡಿತ್ ಅರವಿಂದ ಕುಮಾರ್ ಆಜಾದ್ ಬನಾರಸ ಘರಾಣಿಯ ಮೂಲಭೂತ ತತ್ವಗಳು, ಲಕ್ಷಣಗಳು, ಶೈಲಿಯ ವಿಶಿಷ್ಟತೆ ಮತು ಕಥಕ ನೃತ್ಯದೊಂದಿಗೆ ಅದರ ಸಂಬಂಧ ಕುರಿತು ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ಡಿ.6 ರಂದು ಕಿರಣಾ ಘರಾಣೆಯ ಗಾಯನ ಶೈಲಿಯ ಉತ್ಕರ್ಷ, ಲಕ್ಷಣ ಮತ್ತು ಖಯಾಲ್ ಬಂದಿಶ್ ಗಾಯನ ವಿಷಯ ಕುರಿತು ಬೆಳಗ್ಗೆ 11 ಗಂಟೆಗೆ ಪಂ. ಮಣಿ ಪ್ರಸಾದ್ ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಪಂಡಿತ್ ಯೋಗೇಶ್ ಸಾಂಶಿ ಅವರು ಪಂಜಾಬ್ ಘರಾಣಿಯ ವಿಶೇಷತೆ ತಬಲ ವಿಷಯವನ್ನು ಕುರಿತು ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ಎಂ. ನಾಟಕ ವಿಭಾಗ: ಡಿ.7ರಂದು ವಿಶ್ವವಿದ್ಯಾಲಯದ ಎಂಎ ನಾಟಕ ವಿಭಾಗದಿಂದ ಅಭಿಜಾತ ರಂಗಭೂಮಿಯೊಂದಿಗೆ ಅನುಸಂಧಾನ ವಿಷಯ ಕುರಿತು ಒಂದು ದಿನ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕುವೆಂಪು ನಗರದ ಗಾನಭಾರತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು,  ರಂಗ ನಿರ್ದೇಶಕ ಬಿ.ವಿ.ರಾಜಾರಾಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ರಂಗಕರ್ಮಿ ಡಾ. ಎಚ್.ಕೆ. ರಾಮನಾಥ್ ಹಾಗೂ ರಂಗನಿರ್ದೇಶಕಿ ಸುಮತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅದೇ ದಿನ ಭಾರತೀಯ ಅಭಿಜಾತ ರಂಗಭೂಮಿ ವಿಷಯ ಕುರಿತು ಡಾ.ಎನ್.ಎಸ್.ತಾರನಾಥ್, ಪಾಶ್ಚಾತ್ಯ ಅಭಿಜಾತ ರಂಗಭೂಮಿ ವಿಷಯ ಕುರಿತು ಡಾ.ಮೀರಾ ಮೂರ್ತಿ, ಆಧುನಿಕ ಭಾರತೀಯ ರಂಗಭೂಮಿಯ ಮೇಲೆ ಅಭಿಜಾತ ರಂಗಭೂಮಿಯ ಪ್ರಭಾವ ವಿಷಯ ಕುರಿತು ಪ್ರೊ.ಎಸ್.ಆರ್.ರಮೇಶ್,  ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ಸಂಜೆ 6.30ಕ್ಕೆ ಭಾಸ ಅವರ ರಚನೆಯ, ಅನುವಾದ ಪರಮೇಶ್ವರ ಭಟ್ಟರ ಮಧ್ಯಮ ವ್ಯಾಯೋಗ ಎಂಬ ನಾಟಕ ನಡೆಯಲಿದೆ. ನಂತರ ವಿಚಾರ ಸಂಕಿರಣ ಮತ್ತು ನಾಟಕ ಪ್ರದರ್ಶನ ಕುರಿತ ಸಂವಾದ ಕಾರ್ಯಕ್ರಮ ನಡೆಯಲಿದೆ.

ಭರತ ನಾಟ್ಯ ವಿಭಾಗ: ಡಿ.8ರಂದು ವಿಶ್ವವಿದ್ಯಾಲಯದ ಭರತನಾಟ್ಯ ವಿಭಾಗದ ವತಿಯಿಂದ ರಾಜ್ಯಮಟ್ಟದ ವಿಚಾರ ಸಂಕಿರಣ ಕುವೆಂಪು ನಗರದ ಗಾನಭಾರತಿಯಲ್ಲಿ ನಡೆಯಲಿದ್ದು, ಯಂತ್ರ, ಮಂತ್ರ, ತಂತ್ರ ಮತ್ತು ನಾಟ್ಯ-ನರ್ತಕಿಯ ದೃಷ್ಠಿ ಕೋನದಲ್ಲಿ ವಿಷಯ ಕುರಿತು ಪದ್ಮಜಾ ಸುರೇಶ್, ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಶೈಲಿಗಳಲ್ಲಿ ನೃತ್ಯ ಸಂಯೋಜನೆ ವಿಷಯ ಕುರಿತು ಚಿತ್ರಾ ಅರವಿಂದ್, ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳಲ್ಲಿ ನೃತ್ಯದ ಸ್ಥಾನ ವಿಷಯ ಕುರಿತು ಪ್ರೊ. ರಾಮಮೂರ್ತಿರಾವ್ ಉಪನ್ಯಾಸ ನಡೆಸಿಕೊಡಲಿದ್ದಾರೆ.

ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕುಲ ಸಚಿವ ಪ್ರೊ.ನಿರಂಜನ ಉಪಸ್ಥಿತರಿದ್ದರು.

Leave a Reply

comments

Related Articles

error: