ಕರ್ನಾಟಕ

ಕಾಡಾನೆ ಹಾವಳಿ: ಮುಂದುವರಿದ ಪ್ರತಿಭಟನೆ; ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು

ಅರಣ್ಯ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲು

ರಾಜ್ಯ(ಮಡಿಕೇರಿ)ಜ.23:-  ಕಾಡಾನೆ ಹಾವಳಿಯನ್ನು ತಡೆಗಟ್ಟಲು ಒತ್ತಾಯಿಸಿದ ಕಾರ್ಮಿಕರು ಮತ್ತು ಕಾಫಿ ಬೆಳೆಗಾರರು ವಿರಾಜಪೇಟೆ ಪಟ್ಟಣದಲ್ಲಿ ರಸ್ತೆ ತಡೆ ಮಾಡಿ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರತಿಭಟಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರದಂದು ನಡೆದಿದೆ.

ಕರಡಿಗೋಡು ಗ್ರಾಮದಲ್ಲಿ ಸೋಮವಾರದಂದು ಕಾಫಿ ಬೆಳೆಗಾರ ಮೋಹನ್‍ದಾಸ್ ಎಂಬವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದರು. ಕಾಡಾನೆ ಉಪಟಳವನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಪಟ್ಟಣದ ವಿರಾಜಪೇಟೆ ರಸ್ತೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಬಳಿಕ ಅಲ್ಪ ಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದರು. ರಸ್ತೆ ತಡೆ ಮಾಡಿದ ಬಳಿಕ ಬಸ್ ನಿಲ್ದಾಣದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಕಾಡಾನೆ ಹಾವಳಿಯನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕ್ರೀಯಾತ್ಮಕ ಯೋಜನೆಗಳಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.   ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ ಕಾಡಾನೆ ಹಾವಳಿಗೆ ಪರಿಹಾರವಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೀಡುತಿರುವ ಪರಿಹಾರ ಕೇವಲ ದಯಾತ್ಮಕ ಪರಿಹಾರ ಎಂದು ದಾಖಲಿಸಲಾಗುತಿದೆ .ದಯಾತ್ಮಕ ಪರಿಹಾರದಡಿಯಲ್ಲಿ ಮಾನವರ ಜೀವಕ್ಕೆ ರೂ.5ಲಕ್ಷಗಳ ಹಣವನ್ನು ಅರಣ್ಯ ಇಲಾಖೆ ನೀಡುತಿರುವುದು ಆಕ್ಷೇಪಾರ್ಹ. ವನ್ಯ ಪ್ರಾಣಿಗಳಿಂದ ಸಂಭವಿಸುವ ಮಾನವರ ಜೀವಹಾನಿಗೆ ಕನಿಷ್ಠ ರೂ.2ಕೋಟಿ ನಿಗಧಿಪಡಿಸಬೇಕಿದೆ ಎಂದು ಒತ್ತಾಯಿಸಿದರು. ಮೃತ ಮೋಹನ್‍ದಾಸ್ ಕುಟುಂಬಸ್ಥರಿಗೆ ನೀಡುತಿರುವ ಹಣ ಕೇವಲ ಭಾಗಶಃ ಪರಿಹಾರ ಎಂದು ಇಲಾಖೆಯ ದಾಖಲಾತಿಗಳಲ್ಲಿ ಬರೆಯಿಸಿಕೊಳ್ಳದಿದ್ದಲ್ಲಿ ಪರಿಹಾರದ ಹಣವನ್ನು ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಮೃತರ ವಾರಿಸುದಾರರು ನಿರಾಕರಿಸುವುದಾಗಿ ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಜೀವಹಾನಿ ಸಂಭವಿಸಿದ್ದರೆ ಉನ್ನತ ಅರಣ್ಯ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆಯೂ ದಯಾತ್ಮಕ ಪರಿಹಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗುವಂತೆಯೂ ವಕೀಲ ಹೇಮಚಂದ್ರ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಿದ್ದಾಪುರ ಪೊಲೀಸ್ ಠಾಣೆಗೆ ಜಮಾಯಿಸಿ ಅರಣ್ಯ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು. ಬಳಿಕ ಪ್ರತಿಭಟನೆಗೆ ಮಣಿದ ಪೊಲೀಸರು ಮುಖ್ಯ ಅರಣ್ಯ ಅಧಿಕಾರಿ ಲಿಂಗರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕೃಸ್ತರಾಜ್ ಸೇರಿದಂತೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ವಿರುದ್ಧ ಹೋರಾಟ ಸಮಿತಿಯ ಪರವಾಗಿ ಸಿಐಟಿಯು ಬೆಂಬಲಿತ ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಕಾರ್ಯಧರ್ಶಿ ಎ.ಮಹದೇವ್, ಕುಕ್ಕನೂರು ಕಿಶನ್,ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೊಲ್ಲೀರ ಧರ್ಮಜ, ಕುಕ್ಕನೂರು ಕುಟುಂಬಸ್ಥರ ಪರವಾಗಿ ಸೋಮಣ್ಣ ಮತ್ತು ರೈತ ಸಂಘ ಕ್ರಮವಾಗಿ ವಯ್ಯಕ್ತಿಕ ಕೇಸು ದಾಖಲಿಸಿಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳ ವಿರುದ್ಧ ಯು.ಡಿ.ಆರ್.ಸಿಆರ್‍ಪಿಸಿ 174 ದಾಖಲಿಸಲಾಗಿದೆ.

ಕಂಬೀರಂಡ ನಂದಾ ಗಣಪತಿ,ಕೊಲ್ಲೀರ ಧರ್ಮಜ, ನಂಡಿಕೇರಿಯಂಡ ಮೋಹನ್, ಸಿಐಟಿಯು ಸಂಘಟನೆಯ ಮುಖಂಡರಾದ ಎಚ್.ಬಿ.ರಮೇಶ್, ಎನ್.ಡಿ.ಕುಟ್ಟಪ್ಪನ್, ಮಹದೇವ್, ದೇವಣೀರ ಸುಜಯ್ ,ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಕೆ.ಮಣಿ,ಸದಸ್ಯ ಅಬ್ದುಲ್ ಶುಕೂರ್,ರೆಜಿತ್ ಕುಮಾರ್,ಸಣ್ಣ ಬೆಳೆಗಾರರ ಸಂಘದ ಪ್ರಮುಖರಾದ ಸಿ.ಎಂ.ಕಾವೇರಪ್ಪ, ಜೋಜಿಜೋಸಫ್, ಮಂಡೇಪಂಡ ಅರ್ಜುನ್, ಜಯಾನಂದ, ಲತೀಶ್ ರೈ, ಮುಸ್ತಫ ಭಾಗವಹಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: