ಕರ್ನಾಟಕ

ಗ್ರಾಮ ವಿಕಾಸ ಯೋಜನೆ : ‘ಹೊಸ್ಕೇರಿ’ ಅಭಿವೃದ್ಧಿಗೆ 1 ಕೋಟಿ ರೂ. ಕ್ರಿಯಾ ಯೋಜನೆ

ರಾಜ್ಯ(ಮಡಿಕೇರಿ) ಜ.23 :- ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಲಾಗಿರುವ ಮಡಿಕೇರಿ ತಾಲೂಕಿನ ‘ಹೊಸ್ಕೇರಿ’ ಗ್ರಾಮದ ಅಭಿವೃದ್ಧಿಯ 1 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ವಿಶೇಷ ಗ್ರಾಮ ಸಭೆಯಲ್ಲಿ ರಚಿಸಲಾಯಿತು.

ಹೊಸ್ಕೇರಿಯ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶೇಷ ಗ್ರಾಮ ಸಭೆ ಗ್ರಾ.ಪಂ ಅಧ್ಯಕ್ಷರಾದ ಪಿ.ಎನ್.ಮಮತರವರ ಅಧ್ಯಕ್ಷತೆಯಲ್ಲಿ ಹಾಗೂ ಎಂಎಲ್‍ಸಿ ಸುನಿಲ್ ಸುಬ್ರಮಣಿಯವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ಸದರಿ ವಿಶೇಷ ಗ್ರಾಮ ಸಭೆಯಲ್ಲಿ 1 ಕೋಟಿ ರೂ. ಮೊತ್ತಕ್ಕೆ ನಿಯಮಾವಳಿಗಳ ಪ್ರಕಾರ ಕ್ರಿಯಾ ಯೋಜನೆಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚಿಸಿ ತಯಾರಿಸಲಾಯಿತು.

ಈ ಸಂದರ್ಭ ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಒಂದು ಗ್ರಾಮವನ್ನು ಪ್ರಸ್ತುತ ಸಾಲಿಗೆ ಆಯ್ಕೆ ಮಾಡಬೇಕಾಗಿದ್ದು, ಅದರಂತೆ ನಾನು ನಿಮ್ಮ ಹೊಸ್ಕೇರಿ ಗ್ರಾಮವನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸಿದ್ದೇನೆ. ಸದರಿ ಅನುದಾನವನ್ನು ಸಾರ್ವಜನಿಕರ ಸಲಹೆಯಂತೆ ಅಗತ್ಯ ಕಾಮಗಾರಿಗಳಿಗೆ ಸಮರ್ಪಕವಾಗಿ ಬಳಸಿ, ಅಭಿವೃದ್ಧಿಗೆ ಕೈಜೋಡಿಸಲು ಮನವಿ ಮಾಡಿದರು. ಕಾಮಗಾರಿಗಳು ಕಳಪೆಯಾಗದಂತೆ ಸಾರ್ವಜನಿಕರು ಕ್ರಮ ವಹಿಸಬೇಕು. ಅಲ್ಲದೇ ಕಾಮಗಾರಿಗೆ ಎಲ್ಲಾರೀತಿಯ ಸಹಕಾರವನ್ನು ನೀಡಲು ಮನವಿ ಮಾಡಿದರು.

ಸಭೆಯಲ್ಲಿ ಪಿ.ಡಿ.ಒ. ಆಶಾ, ಗ್ರಾ.ಪಂ  ಉಪಾಧ್ಯಕ್ಷರಾದ ಯೂಸಫ್, ಆರ್.ಎಂ.ಸಿ. ಸದಸ್ಯರಾದ  ಕಾಂಗೀರ ಸತೀಶ್, ನೋಡಲ್ ಅಧಿಕಾರಿ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀಕಂಠಯ್ಯ, ಕಿರಿಯ ಅಭಿಯಂತರರಾದ ರಶ್ಮಿ, ಸ್ಥಳೀಯರಾದ ರಘು ಆನಂದ್, ಚೇರಂಡ ನಂದ, ಮಂಡೇಪಂಡ ಕುಟ್ಟಣ್ಣ, ಸಾರ್ವಜನಿಕರು, ಗ್ರಾಮ ಪಂಚಾಯ್ತಿ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: