ಪ್ರಮುಖ ಸುದ್ದಿಮೈಸೂರು

ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ರಾಜಕೀಯ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಜ.24:- ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿಚಾರವಾಗಿ   ಹಾಸನ  ಮಾಜಿ ಶಾಸಕ ಶಿವರಾಂ ನನ್ನ ಜೊತೆ ಮಾತನಾಡಿಲ್ಲ. ಈ ವರ್ಗಾವಣೆ ಆಡಳಿತಾತ್ಮಕ ಪ್ರಕ್ರಿಯೆ.ಇದರಲ್ಲಿ ರಾಜಕೀಯ ಇಲ್ಲ. ಇದನ್ನೇ ಯಾಕೆ ದೊಡ್ಡ ವಿಚಾರ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ತಮ್ಮ ನಿವಾಸದ ಎದುರು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೇವೇಗೌಡರ ಹೇಳಿಕೆ ಬಗ್ಗೆ ನಾನು ಟೀಕೆ ಮಾಡಲ್ಲ‌. ಅವರು ಯಜಮಾನರು.ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ.ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಕೇಂದ್ರ ಸರ್ಕಾರದ ಅನುದಾನ ಯಡಿಯೂರಪ್ಪ ಮನೆದಾ? ನಮಗೆ ಭಿಕ್ಷೆ ಕೊಡುವ ರೀತಿಯಲ್ಲಿ ಅಮಿತ್ ಷಾ, ಯಡಿಯೂರಪ್ಪ ನಾವು ಕೇಂದ್ರದಿಂದ ಹಣ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲ‌. ಸುಮ್ಮನೆ ಜನರಿಗೆ ತಪ್ಪು ಮಾಹಿತಿ ನೀಡಬಾರದು. ಕಾನೂನಾತ್ಮಕವಾಗಿ ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ರಾಜ್ಯಕ್ಕೆ ಅನುದಾನ ನೀಡಲೇಬೇಕು.ಯಡಿಯೂರಪ್ಪಗೆ ಈ ರೀತಿ ಮಾತನಾಡಲು ನಾಚಿಕೆಯಾಗಬೇಕು. ಅವರು ಮುಖ್ಯಮಂತ್ರಿಯಾಗಿದ್ದವರು. ಸ್ವಲ್ಪ ಕಾನೂನು ತಿಳಿದುಕೊಳ್ಳಬೇಕು ಎಂದು ಹರಿಹಾಯ್ದರು.

ಬಿಜೆಪಿಯವರು ಸುಮ್ಮನೆ ತಮಟೆ ಹೊಡೆದುಕೊಂಡು ಪುಂಗಿ ಊದಿಕೊಂಡು ಓಡಾಡ್ತಾರೆ. ಇವರು ಜೈಲಿಗೆ ಯಾಕೆ ಹೋಗಿದ್ದರು. ಬಿಜೆಪಿಯವರು ನಂಟಸ್ತನ, ಬೀಗತನ ಮಾಡಲು ಜೈಲಿಗೆ ಹೋಗಿದ್ದರಾ ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಜಾವಡೆಕರ್ ಭವಿಷ್ಯ ನುಡಿತಾರಾ. ಜಾವಡೇಕರ್ ಗೆ ಕರ್ನಾಟಕದ ಬಗ್ಗೆ ಏನು ಗೊತ್ತು. ಚುನಾವಣೆಗೆ ಅಮಿತ್ ಷಾ, ಮೋದಿ, ಜಾವಡೇಕರ್ ಎಷ್ಟೇ ಬಂದರೂ ಅವರ ಆಟ ಇಲ್ಲಿ ನಡೆಯಲ್ಲ. ಚುನಾವಣೆಯಲ್ಲಿ ನೂರಕ್ಕೆ ನೂರು ನಾವೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿ.ಶ್ರೀನಿವಾಸಪ್ರಸಾದ್ ಸಿದ್ದರಾಮಯ್ಯ ಕುರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಕೀಳು ಮಟ್ಟದ ರಾಜಕಾರಣಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ‌. ಇಷ್ಟೊಂದು ಕೆಳಮಟ್ಟದ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೇ ಇದು ನೂರಕ್ಕೆ ನೂರು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಾಳಿನ ಬಂದ್ ಗೆ ಪ್ರತಿಕ್ರಿಯಿಸಿದ ಅವರು ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಿಎಂ ಜೊತೆಗಿದ್ದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಅಹವಾಲುಗಳನ್ನು ಸಲ್ಲಿಸಲು ನೂಕುನುಗ್ಗಲು ಉಂಟಾಗಿತ್ತು.(ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: