ಮೈಸೂರು

ಪ್ರಸಕ್ತ ಅವಧಿಯ ಕೊನೆಯ ಮೈಸೂರು ಮೇಯರ್ ಹಾಗೂ ಉಪಮೇಯರ್ ಆಯ್ಕೆ ಚುನಾವಣೆ ವೇಳೆ ಹೈಡ್ರಾಮಾ

ಕಾಂಗ್ರೆಸ್ ಜೆ ಡಿಎಸ್ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ

ಮೈಸೂರು,ಜ.24:- ಪ್ರಸಕ್ತ ಅವಧಿಯ ಕೊನೆಯ ಮೈಸೂರು ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಇಂದು ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಜೆ ಡಿಎಸ್ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ನಡೆದಿದೆ.

ಶೋಹೆಲ್ ಬೇಗ್, ಪ್ರಶಾಂತ್ ಗೌಡ, ಜಗದೀಶ್ ಅವರು ಮೇಯರ್ ಸ್ಥಾನದ ಆಕಾಂಕ್ಷಿ ಭಾಗ್ಯವತಿಗೆ ಛೀಮಾರಿ ಹಾಕಿದ್ದು, ಕಾಂಗ್ರೆಸ್ ಮಹಿಳಾ ಪಾಲಿಕೆ ಸದಸ್ಯರು ಭಾಗ್ಯವತಿಗೆ ಮುತ್ತಿಗೆ ಹಾಕಿದ್ದು, ಗಲಾಟೆ ಗದ್ದಲ ನಡೆದಿದೆ. ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಪಾಲಿಕೆ ಸದಸ್ಯರು ಭಾಗ್ಯವತಿಗೆ ರಕ್ಷಣೆ ನೀಡಿದರು. ಮೈಸೂರು ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಜಟಾಪಟಿ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿ ಹೈಡ್ರಾಮ ನಡೆಯಿತು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರ ನಡುವೆ ಭಾರಿ ಜಟಾಪಟಿ ನಡೆದಿದ್ದು, ಚುನಾವಣಾ ಅಧಿಕಾರಿ ಎದುರಲ್ಲೇ ತಳ್ಳಾಟ ನೂಕಾಟಗಳು ನಡೆಯಿತು. ಶಾಸಕ, ಸದಸ್ಯ ಸಂಸದರೆಲ್ಲರೂ ಜಟಾಪಟಿಯ ಅಖಾಡದಲ್ಲಿದ್ದರು. ಜನಪ್ರತಿನಿಧಿಗಳು ಯಾರ ಮಾತನ್ನೂ ಕೇಳದೆ ಕೂಗಾಡುತ್ತಿದ್ದರು.

ಶಾಸಕರು ಸಚಿವರ  ನಡುವೆ ಕೂಡ ಜಟಾಪಟಿ ನಡೆದಿದ್ದು, ಸಚಿವ ತನ್ವೀರ್  ಸೇಠ್ ವಿರುದ್ದ ಶಾಸಕ ಜಿ‌ಟಿ.ದೇವೆಗೌಡ ಹರಿಹಾಯ್ದರು.ಪಾಲಿಕೆ ಕೌನ್ಸಿಲ್ ಆವರಣದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಅಕ್ಕಪಕ್ಕದಲ್ಲೇ ಕುಳಿತಿದ್ದ ಇಬ್ಬರೂ ಜಗಳಕ್ಕೆ ನಿಂತು ವಾಕ್ಸಮರ ಸೃಷ್ಟಿಯಾಗಿತ್ತು. ಕೈ ಕೈ ತೋರಿಸಿಕೊಂಡು ಶಾಸಕ ಜಿಟಿಡಿ ಮತ್ತು ಸಚಿವ ತನ್ವೀರ್ ಸೇಠ್ ಜಗಳ ಮಾಡಿಕೊಂಡರು.  ಸಚಿವ ತನ್ವೀರ್ ಸೇಠ್ ಪೇಪರ್ ಹರಿದು ಎಸೆದರು. ತನ್ವೀರ್ ಸೇಠ್ ವರ್ತನೆಗೆ ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಪರಸ್ಪರ ಜಟಾಪಟಿಗಿಳಿದ ಸಚಿವರು ಹಾಜರಾತಿ ಪತ್ರ ಹರಿದು ಹಾಕಿದರು.  ಇದೇ ವೇಳೆ ಕಾಂಗ್ರೆಸ್ ನ ಪಾಲಿಕೆ ಸದಸ್ಯೆ ಭಾಗ್ಯವತಿ ಗಳಗಳನೆ ಕಣ್ಣಿರು ಹಾಕಿದರು. ಕಾಂಗ್ರೆಸ್ ಪಾಲಿಕೆ ಸದಸ್ಯರು ಮನವೊಲಿಕೆ ಪ್ರಯತ್ನಿಸಿದರು. ಚುನಾವಣಾ ಅಧಿಕಾರಿ ಶಿವಯೋಗಿ ಕಳಸದ್ ಅವರಿಂದ ಚುನಾವಣಾ ಪ್ರಕ್ರಿಯೆ ಆರಂಭಿಸಿ ಪಾಲಿಕೆ ಸದಸ್ಯರಿಂದ ಹಾಜರಾತಿ ಸಂಗ್ರಹಿಸಿದರು. ಭಾಗ್ಯವತಿ ಜೆ ಡಿ ಎಸ್ ಬೆಂಬಲ ಪಡೆದು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ಮುಂದೂಡುವಂತೆ ಸಚಿವ ತನ್ವೀರ್ ಸೇಠ್ ಹಾಗೂ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಕಾಂಗ್ರೆಸ್ ಬೇಡಿಕೆಗೆ ಚುನಾವಣಾ ಅಧಿಕಾರಿ ನಿರಾಕರಿಸಿದರು.ನಿಮ್ಮ ಹಕ್ಕನ್ನು ಮತದಾನದ ಮೂಲಕ ಸಾಬೀತು ಮಾಡಿ  ಎಂದು ಸಚಿವ ತನ್ವೀರ್ ಸೇಠ್ ಅವರಿಗೆ ಚುನಾವಣಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಕೋರಂ ಇದೆ ಹೀಗಾಗಿ ಮೇಯರ್ ಚುನಾವಣೆ ಮಾಡುತ್ತೇನೆ.ದಲಿತರಿಗೆ ಮೀಸಲಾದ ಸ್ಥಾನವನ್ನು ಜೆ ಡಿ ಎಸ್ ಬಿಜೆಪಿ ನಾಯಕರು ಹೈ ಜಾಕ್ ಮಾಡಿದ್ದಾರೆ. ಹೀಗಾಗಿ ಈ ಮೇಯರ್ ಗಿರಿ ಯಾರಿಗೂ ಬೇಡ ಎಂದು ಮಾಜಿ ಮೇಯರ್ ಪುರುಷೋತ್ತಮ್ ಚುನಾವಣಾ ಅಧಿಕಾರಿಗೆ ಏರು ಧ್ವನಿಯಲ್ಲಿಯೇ ಮನವಿ ಮಾಡಿದರು. ಒಟ್ಟಿನಲ್ಲಿ ಮೇಯರ್ ಚುನಾವಣೆಯ ವೇಳೆ ಹೈಡ್ರಾಮಾವನ್ನೇ ಸೃಷ್ಟಿಸಿದರು. ಪಾಲಿಕೆ ಜಗದೀಶ್ ಟೇಬಲ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯುಕ್ತರ ಮಾತಿಗೂ ಬೆಲೆ ಕೊಡದೆ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆಗೆ ಸಹಕಾರ ಕೊಡಿ ಎಂದರೂ ಕಾಂಗ್ರೆಸ್ ಸದಸ್ಯರು ಪಟ್ಟು ಬಿಡಲಿಲ್ಲ. ಆಯುಕ್ತರು ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಭಾಗ್ಯವತಿ ನಾಮಪತ್ರ  ಹಿಂಪಡೆಯಲು ಅವಕಾಶ ನೀಡಿದ್ದರು. ಬಂಡಾಯ ಅಭ್ಯರ್ಥಿ ಭಾಗ್ಯವತಿ ನಾಮಿನೇಷನ್ ಹಿಂಪಡೆಯದ ಹಿನ್ನಲೆಯಲ್ಲಿ ಆಯುಕ್ತರು ಚುನಾವಣೆ ಘೋಷಣೆ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: