ಮೈಸೂರು

ವಿಶ್ರಾಂತಿ ಪಡೆಯುತ್ತಿರುವ ಗಜಪಡೆ; ಅಲೋಕ ಆವರಣಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ಗಜಗಾತ್ರ –  ಅದರ ಮೇಲೆ ಬಿದ್ದಂತಹ ಧೂಳುಗಳನ್ನು ಕೊಡವಿ, ಮೈ ತಿಕ್ಕಿ ನೀರಿನಿಂದ ಸ್ವಚ್ಛಗೊಳಿಸುತ್ತಿರುವ ಕೆಲವು ಮಂದಿ, ಅದನ್ನು ನೋಡಲು ಮುಗಿಬಿದ್ದ  ಜನರು ಇವೆಲ್ಲ ಕಂಡು ಬಂದಿದ್ದು ಇಲವಾಲದ ಅಲೋಕ ಅರಣ್ಯದಲ್ಲಿ. ಯಾಕೆಂದರೆ ಇಲ್ಲಿ ಈಗ ದಸರಾ ಜಂಬೂ ಸವಾರಿಯ ಆನೆಗಳು ವಿಶ್ರಾಂತಿ ಪಡೆಯುತ್ತಿವೆ.

ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಸುಂದರ, ಮನ ಮೋಹಕವಾದ ಮೈಸೂರು ದಸರಾಕ್ಕೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಕಾಡಿನಿಂದ ನಾಡಿಗೆ ಆನೆಗಳನ್ನು ಅದ್ಧೂರಿಯಾಗಿ ಕರೆತರಲಾಗಿದ್ದು ಅತಿಥಿ ಸತ್ಕಾರ ನಡೆಯುತ್ತಿದೆ.

dasara elephants rest (2)

ಕಬ್ಬು, ಬೆಲ್ಲ, ಭತ್ತ, ತೆಂಗಿನಕಾಯಿ, ಆಲದ ಎಲೆಗಳನ್ನು ಆಹಾರವಾಗಿ ನೀಡಲಾಗುತ್ತಿದ್ದು, ಅವುಗಳನ್ನು ತಿಂದು ವಿಶ್ರಾಂತಿ ಪಡೆಯುತ್ತಿವೆ. ಕುದುಪಲು ಅಕ್ಕಿ ಗಂಜಿಯನ್ನು ಸೇವಿಸಿದ ಆನೆಗಳನ್ನು ಆನೆ ವೈದ್ಯ ಡಾ. ನಾಗರಾಜ್ ನೇತೃತ್ವದ ತಂಡ ತಪಾಸಣೆ ನಡೆಸಿತು.

ಲಾರಿಯಲ್ಲಿ ಬಂದಿಳಿದ ಆನೆಗಳಿಗೆ ಸ್ವಲ್ಪ ದಣಿವಾದಂತೆ ಕಾಣಿಸಿಕೊಂಡಿದ್ದರಿಂದ ಗ್ಲೂಕೋಸ್ ನೀಡಲಾಗಿದೆ. ಆವರಣದ  ಒಂದು ಕಡೆ ಅಭಿಮನ್ಯು, ಕಾವೇರಿ, ವಿಜಯಾ, ಗಜೇಂದ್ರನನ್ನು ಮತ್ತೊಂದು ಕಡೆ ಅರ್ಜುನ, ಬಲರಾಮರನ್ನು ಕಟ್ಟಲಾಗಿದೆ.

ಆನೆಗಳ ಮಾವುತರು, ಕಾವಾಡಿಗಳು ಮರದ ನೇರಳಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರೆ, ಅವರ ಮಕ್ಕಳು ಸ್ನೇಹಿತರ ಜೊತೆ ವಿವಿಧ ಆಟಗಳಲ್ಲಿ ತೊಡಗಿಕೊಂಡಿರುವುದು ಕಂಡು ಬಂತು.

ಅ.25ರ ವರೆಗೆ ಆನೆಗಳು ಅಲೋಕ ಆವರಣದಲ್ಲಿಯೇ ವಾಸ್ತವ್ಯ ಹೂಡಲಿವೆ. ಅ.26ರ ಬೆಳಿಗ್ಗೆ ಕಾಲ್ನಡಿಗೆಯಲ್ಲೇ ಅಂಬಾವಿಲಾಸ ಅರಮನೆ ಎದುರು ಬರಲಿವೆ. ಅಲ್ಲಿಯವರೆಗೆ ಅಲೋಕ ಆವರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Leave a Reply

comments

Tags

Related Articles

error: