
ಪ್ರಮುಖ ಸುದ್ದಿಮೈಸೂರು
ಮೈಸೂರು ವಿವಿ: ಘಟಕ ಕಾಲೇಜುಗಳ ಪ್ರಾಂಶುಪಾಲರ ನೇಮಕಾತಿಗೆ ತಡೆ
ರಾಜ್ಯಪಾಲರ ಆದೇಶ ಉಲ್ಲಂಘಿಸಿದ ಹಿನ್ನೆಲೆ ಮೈಸೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳ ನೇಮಕ ತಡೆ ಹಿಡಿಯುವಂತೆ ಸರಕಾರ ಶನಿವಾರ ಆದೇಶಿಸಿದೆ.
ಕುಲಪತಿಗಳು ತಮ್ಮ ಅಧಿಕಾರ ಅವಧಿಯ ಕೊನೆಯ ಆರು ತಿಂಗಳಲ್ಲಿ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ ಎನ್ನುವ ರಾಜ್ಯಪಾಲರ ಸಚಿವಾಲಯದ ಸುತ್ತೋಲೆಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ವಿವಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ವೀರಬ್ರಹ್ಮಚಾರ್ ನ.19ರಂದು ಈ ಆದೇಶ ಹೊರಡಿಸಿದ್ದಾರೆ.
ಕುಲಪತಿಗಳು ತಮ್ಮ ಅಧಿಕಾರವಧಿಯ ಕೊನೆಯ ಆರು ತಿಂಗಳಲ್ಲಿ ಯಾವುದೇ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ ಎನ್ನುವ ಸುತ್ತೋಲೆಯನ್ನು ಉಲ್ಲಂಘಿಸಿರುವುದಲ್ಲದೆ, ಘಟಕ ಕಾಲೇಜುಗಳಲ್ಲಿ ಪ್ರಾಂಶುಪಾಲರ ನೇಮಕಾತಿಗೆ ಸರಕಾರದ ಪೂರ್ವಾನುಮತಿ ಪಡೆಯದೆ ಇರುವುದರಿಂದ ನೇಮಕ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಮೈಸೂರು ವಿವಿ ಕುಲಪತಿಗಳಿಗೆ ಆದೇಶಿಸಲಾಗಿದೆ.
ಮೈಸೂರು ವಿವಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಸರಕಾರದ ಸುತ್ತೋಲೆಯನ್ನು ಉಲ್ಲಂಘನೆ ಮಾಡಿರುವ ಕಾರಣ ನೇಮಕ ಪ್ರಕ್ರಿಯೆಗೆ ಸರಕಾರ ತಡೆ ನೀಡಿದೆ. ಮೈಸೂರು ವಿವಿ ಉದ್ದೇಶಿಸಿದ ಬೋಧಕ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಯಲ್ಲಿ ನಿಯಮ ಪಾಳಿಸಿಲ್ಲ ಎನ್ನುವ ಕಾರಣಕ್ಕೆ ಸರಕಾರ ತಡೆ ನೀಡಿತ್ತು. ಆದರೆ, ಬಳಿಕ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರು ಸೆ.29ರಂದು ರಾಜ್ಯಪಾಲರ ಪತ್ರವನ್ನು ಉಲ್ಲೇಖಿಸಿ ನೇರ ನೇಮಕ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಈ ಸಂಬಂಧ ವಿವಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎನ್. ವೀರಬ್ರಹ್ಮಚಾರಿ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
ಸರಕಾರದ ಪೂರ್ವಾನುಮತಿ ಪಡೆಯದೆ ಇರುವುದರಿಂದ ನೇಮಕ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂದು ಕುಲಪತಿಗಳಿಗೆ ಬರೆದ ಪತ್ರದಲ್ಲಿ ಆದೇಶಿಸಿದ್ದಾರೆ.