
ಮೈಸೂರು
ಜಿಲ್ಲೆಯಲ್ಲಿ ಬರಗಾಲ ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚನೆ
ಮೈಸೂರು ಜಿಲ್ಲೆಯಲ್ಲಿ ಬೇಸಿಗೆಗೂ ಮೊದಲೇ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು, ಮೇವು ಪೂರೈಕೆಗೆ ಅಧಿಕಾರಿಗಳು ಪ್ರಥಮ ಆದ್ಯತೆ ನೀಡಬೇಕೆಂದು ಜಿಪಂ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 16 ಕಡೆಗಳಲ್ಲಿ ನವೆಂಬರ್ ಅಂತ್ಯದಲ್ಲಿ ಮೇವು ಕೇಂದ್ರ ತೆರೆಯಲಾಗುವುದು. ಎರಡನೇ ಹಂತದಲ್ಲಿ ಎಲ್ಲ ಹೋಬಳಿ ಕೇಂದ್ರದಲ್ಲಿ ಕೇಂದ್ರ ತೆರೆಯಲಾಗುವುದು. ಇದಕ್ಕೆ 593.20 ಲಕ್ಷ ರು.ಗಳ ಯೋಜನೆಗಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಪ್ರಸಾದ್ ಮೂರ್ತಿ ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಮಳೆಯಾಶ್ರಿತ ಪ್ರದೇಶದಲ್ಲಿ ಒಟ್ಟು 17 ಸಾವಿರ ಹೆಕ್ಟೇರ್ನಷ್ಟು ಬೆಳೆಹಾನಿಯಾಗಿದ್ದು, 16 ಸಾವಿರ ಹೆಕ್ಟೇರ್ನಲ್ಲಿ ಶೇ.30ರಷ್ಟು ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ಅಧಿಕಾರಿ ಸೋಮಸುಂದರ್ ತಿಳಿಸಿದರು.
ಪಡಿತರ ಕೂಪನ್ ವ್ಯವಸ್ಥೆಯಲ್ಲೂ ಅವ್ಯವಹಾರ ಪ್ರಾರಂಭವಾಗಿದೆ. ಜಿಲ್ಲೆಯ 107 ನ್ಯಾಯ ಬೆಲೆ ಅಂಗಡಿ, 27 ಫೋಟೋ ಸೇವಾ ಕೇಂದ್ರಗಳಲ್ಲಿ ನಕಲಿ ಕೂಪನ್ ಬಖಲೆ ಬಗ್ಗೆ ತನಿಖೆ ನಡೆಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬರಗಾಲ ಎದರಿಸಲು ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಚರ್ಚೆ ನಡೆಸಲಾಯಿತು. ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಉಪಾಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ದಯಾನಂದ ಮೂರ್ತಿ, ಜಯಲಕ್ಷ್ಮಿ ರಾಜಣ್ಣ,ಸಿಇಒ ಶಿವಶಂಕರ್ ಬರ ಎದುರಿಸಲು ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.