ಮೈಸೂರು

ಡಿ. ಆರ್. ರಾಜು ಅವರನ್ನು ಕರ್ನಾಟಕ ಪೌರಕಾರ್ಮಿಕ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ: ಸಿ.ಎಂ.ರಾಮಯ್ಯ

ಆದಿ ದ್ರಾವಿಡ ಪೌರಕಾರ್ಮಿಕ ಜನಾಂಗದ ಮುಖಂಡ, ನಂಜನಗೂಡು ನಗರಸಭಾ ಸದಸ್ಯ, ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿ ದ್ರಾವಿಡ ಯುವಕರ ಅಭಿವೃದ್ದಿ ಮಹಾಸಂಘದ ಮಾಜಿ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಅವರನ್ನು ಕರ್ನಾಟಕ ಪೌರಕಾರ್ಮಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಕರ್ನಾಟಕ ರಾಜ್ಯ ಆದಿ ದ್ರಾವಿಡ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಸಿ.ಎಂ.ರಾಮಯ್ಯ ಮನವಿ ಮಾಡಿದರು.

ಭಾನುವಾರ ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ದ್ರಾವಿಡ ಸಮಾಜದವರು ಮೈಸೂರು ವಿಭಾಗದ ಮಂಡ್ಯ, ರಾಮನಗರ, ಚಾಮರಾಜನಗರ, ಕೊಡಗು, ಹಾಸನ ಹಾಗೂ ಮೈಸೂರು ಗ್ರಾಮಾಂತರದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ನಮ್ಮ ಸಮಾಜದವರನ್ನು ಗುರುತಿಸಿ ಒಳ್ಳೆಯ ನಿಗಮ ಮಂಡಳಿಗಳಲ್ಲಿ ಪ್ರಾತಿನಿಧ್ಯ ದೊರಕದೇ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಜಾವಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಅವರನ್ನು ಮೈಸೂರು ಮಹಾನಗರ ಪಾಲಿಕೆಯ 40 ನೇ ವಾರ್ಡ್ ಗೆ ಸ್ಪರ್ಧಿಸಲು ಆದಿದ್ರಾವಿಡ ಜನಾಂಗದ ಮುಖಂಡರೇ ಟಿಕೆಟ್ ಕೊಡಿಸಿ, ಹೆಚ್ಚಿನ ಮತಗಳನ್ನು ಹಾಕಿಸಿ ಗೆಲ್ಲಿಸಲಾಯಿತು. ನಂತರ ನಗರ ಪಾಲಿಕೆ ಮೇಯರ್ ಆದರು. ನಮ್ಮ ಸಮಾಜದವರನ್ನು ಸರ್ಕಾರದ ನಿಗಮ ಮಂಡಳಿಗಳಲ್ಲಿ ನೇಮಿಸುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿ, ಯಾವುದೇ ಸ್ಥಾನಮಾನ ಕೊಡಿಸದೆ ಆದಿದ್ರಾವಿಡ ಜನಾಂಗಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ನಾರಾಯಣ ಅವರು ನಮ್ಮ ಸಮಾಜಕ್ಕೆ ಸೇರಿದವರಲ್ಲ. ಅವರ ಬದಲಾಗಿ  ಡಿ.ಆರ್.ರಾಜು ಅವರು ಪ್ರಾಮಾಣಿಕ ಕರ್ತವ್ಯ ಸೇವೆ ಸಲ್ಲಿಸಿರುವುದರಿಂದ ಅವರನ್ನು ಆದಿ ದ್ರಾವಿಡ  ಜನಾಂಗದ ಮುಂದಿನ ನಾಯಕ ಎಂದು ಘೋಷಿಸುತ್ತಿದ್ದೇವೆ. ಅಲ್ಲದೇ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಈಗಾಗಲೇ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಂಗಣ್ಣ, ಸಣ್ಣಬೋರ, ಎಂ.ಕೃಷ್ಣ, ಕೆ.ರಾಜ, ಕೆ.ನಂಜಪ್ಪ ಮತ್ತು ಎಂ.ರಂಗಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: