
ವಿದೇಶ
ವಿವಾದಿತ ದ್ವೀಪಗಳ ಕುರಿತು ಪುಟಿನ್-ಅಬೆ ಮಾತುಕತೆ
ಲಿಮಾ (ಪೆರು): ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಉಂಟಾದ ವೈಮನಸ್ಸು ಮರೆಯುವ ನಿಟ್ಟಿನಲ್ಲಿ ಜಪಾನ್ ಮತ್ತು ರಷ್ಯಾ ನಡುವಿನ ವಿವಾದಾತ್ಮಕ ದ್ವೀಪಗಳ ಕುರಿತು ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ಮಾತುಕತೆ ನಡೆಸಿದ್ದಾರೆ.
ಉಭಯ ದೇಶಗಳ ಮಧ್ಯೆ ಇರುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಶಾಂತ ಮಹಾಸಾಗರದಂಚಿನ ರಾಷ್ಟ್ರಗಳ ವ್ಯಾಪಾರ ಒಕ್ಕೂಟದ ಸಮ್ಮೇಳನ “ಫೆಸಿಫಿಕ್ ರಿಮ್ ಸಮಿತ್” ಪಾರ್ಶ್ವದಲ್ಲಿ ಉಭಯ ನಾಯಕರು ಸುಮಾರು ಎಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಲಿಮಾದಲ್ಲಿ ಪುಟಿನ್ ಅವರ ಜತೆಗಿನ ಮಾತಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಪಾನ್ ಪ್ರಧಾನಿ ಅಬೆ, “ವಿವಾದಾತ್ಮಕ ದ್ವೀಪಗಳ ಕುರಿತು ನಿರ್ಣಯಕ್ಕೆ ಬರಲು ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳಲು ಇದು ಸುಸಮಯ” ಎಂದಿದ್ದಾರೆ.
ದಕ್ಷಿಣ ಚೀನಾ ಸಮುದ್ರದ ಕುರಿತು ರಷ್ಯಾ ಒಕ್ಕೂಟವು ಚೀನಾ ಪರ ವಹಿಸಿದ್ದು ಜಂಟಿ ನೌಕಾ ಕವಾಯತನ್ನು ಕೂಡ ನಡೆಸಿದ್ದವು. ಅಮೆರಿಕದ ಮಿತ್ರರಾಷ್ಟ್ರವಾಗಿರುವ ಜಪಾನ್ ಜೊತೆ ಉಂಟಾಗಿರುವ ಈ ವಿವಾದಲ್ಲಿ ರಷ್ಯಾ ತನ್ನ ವಶದಲ್ಲಿರುವ ದ್ವೀಪಗಳನ್ನು ಜಪಾನ್ಗೆ ಬಿಟ್ಟುಕೊಡುವುದೇ? ಅಥವಾ ಬೇರೊಂದು ಒಪ್ಪಂದಕ್ಕೆ ಬರುವ ಮೂಲಕ ವೈಮನಸ್ಸು ಕಡಿಮೆ ಮಾಡಲು ಸಕಾರಾತ್ಮಕವಾಗಿ ಪ್ರಯತ್ನಿಸುವುದೇ ಎಂದು ಕಾದುನೋಡಬೇಕಿದೆ.