ಪ್ರಮುಖ ಸುದ್ದಿಮೈಸೂರು

ಕರ್ನಾಟಕ ಬಂದ್ : ಗ್ರಾಮಾಂತರದಲ್ಲಿ ಓಡುತ್ತಿಲ್ಲ ಸರ್ಕಾರಿ ಬಸ್; ಮಕ್ಕಳಿಗೆ ಹಾಜರಾತಿ ನೀಡಿ ಅಂದ್ರು ಡಿಸಿ: ಯಾಕ್ರೀ ಬಸ್ ಬಿಡ್ತಿಲ್ಲ ಎಂದ್ರು ಪ್ರತಾಪ್ ಸಿಂಹ

ಮೈಸೂರು,ಜ.25:- ಮೈಸೂರಿನಲ್ಲಿ ಪ್ರತಿಭಟನೆಯ ಕಾವು  ಆರಂಭವಾಗಿದೆ. ಮೈಸೂರಿನ ನಗರ ಬಸ್ ನಿಲ್ದಾಣದ ಮುಂಭಾಗ ಮೈಸೂರು ಕನ್ನಡಪರ ಸಂಘಟನೆಗಳು ಮಹದಾಯಿಗಾಗಿ ಪ್ರತಿಭಟನೆ ನಡೆಸಿವೆ.

ನಗರ ಬಸ್ ನಿಲ್ದಾಣದ ಮುಂಭಾಗ ಬಸ್ ಹೊರಹೋಗದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್‌ಗಳು ಹೊರಹೋಗದಂತೆ ನಿಂತು ಪ್ರತಿಭಟನೆ ನಡೆಸಿದರಲ್ಲದೇ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಿದರು. ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡು- ಮೈಸೂರಿಗೆ ಸಂಚರಿಸುವ ಸಾರಿಗೆ ಇಲಾಖೆಯ ಬಸ್ ಸಂಪೂರ್ಣ ಸ್ಥಗಿತವಾಗಿದ್ದು, ನಂಜನಗೂಡಿನ ಡಿಪೋದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳು ನಿಂತಲ್ಲೆ ನಿಂತಿವೆ. ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ತೀವ್ರ ಪರದಾಡುವಂತಾಗಿದ್ದು, ಆಟೋ, ಖಾಸಗಿ ಟೆಂಪೋಗಳಿಗೆ ಪ್ರಯಾಣಿಕರು ಮುಗಿಬಿದ್ದರು. ನಂಜನಗೂಡಿನ ಹಲವು ಕಡೆ ಬಿಗಿ ಪೋಲಿಸ್ ಬಂದೋಬಸ್ತ್ ಇದ್ದರೂ ಕೂಡ ಬಸ್  ತೆಗೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಮೈಸೂರಿನ ಡಿ.ದೇವರಾಜ ಅರಸು ರಸ್ತೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಕರ್ನಾಟಕ ಬಂದ್ ಗೆ ಬೆಂಬಲ ನೀಡಿ ಅರಸು ರಸ್ತೆಯಲ್ಲಿರೋ ಅಂಗಡಿ ಬಾಗಿಲನ್ನುವ್ಯಾಪಾರಿಗಳು ಮುಚ್ಚಿದ್ದಾರೆ. ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಅಶ್ವಾರೋಹಿ ದಳ ಸೇರಿದಂತೆ ಪೊಲೀಸ್ ಬಿಗಿ ಭದ್ರತೆಯನ್ನೊದಗಿಸಲಾಗಿದೆ. ಹೋರಾಟಗಾರರು ರೈತರ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದು, ಕೆಲವೆಡೆ ಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸುತ್ತಿದ್ದಾರೆ. ಶಾಲಾ ಕಾಲೇಜುಗಳು ನಿಗದಿಯಂತೆ ಆರಂಭಗೊಂಡಿವೆ. ಮಧ್ಯದಲ್ಲಿ ರಜೆ ಎಂದು ಘೋಷಿಸಿದರೆ ಎಂಬ ಆತಂಕದಲ್ಲಿದ್ದ ಪೊಲೀಸರು ಶಾಲೆಯ ಬಳಿಯೇ ಕಾಯುತ್ತಿರುವ ದೃಶ್ಯ ಕಂಡು ಬಂತು. ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿಲ್ಲ. ಯಾವುದೇ ರೀತಿಯ ಅಹಿತಕರಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮೀಷನರ್ ಅವರಿಗೆ ತಿಳಿಸಿದ್ದೇನೆ. ಗ್ರಾಮಾಂತರ ಭದ್ರತೆಯ ಕುರಿತು ಎಸ್ ಪಿ ಯವರಿಗೆ ಮಾಹಿತಿ ನೀಡಿದ್ದೇನೆ. ಇಂದು ಬಸ್ ವಿಳಂಬವಾಗುವ ಕಾರಣ ಮಕ್ಕಳು ಶಾಲೆಗೆ ಬಾರದೇ ಇರಬಹುದು. ಅವರ ಹಾಜರಾತಿಯನ್ನು ತೆಗೆಯದೇ ಸಹಕರಿಸಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.  ಬೆಳಿಗ್ಗೆಯಿಂದಲೇ ಖಾಸಗಿ ವಾಹನಗಳು ರಸ್ತೆಗಿಳಿದಿವೆ. ನಗರ ಬಸ್ ನಿಲ್ದಾಣದಲ್ಲಿ ಜನ ಹೇಗೂ ಕಡಿಮೆ ಇದ್ದಾರೆ ಅನ್ನೊ ದೃಷ್ಟಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದೂ ಕಂಡು ಬಂತು.

ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ದಿಢೀರ್ ಭೇಟಿ ನೀಡಿ ಬಸ್ ನಿಲ್ಲಿಸಿದ್ದಕ್ಕೆ ಅಧಿಕಾರಿಗಳನ್ನು ಮಾಹಿತಿ ಕೇಳಿದರು. ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಕೇಳಿದರು. ಸ್ಥಳದಲ್ಲೇ ಅಧಿಕಾರಿಗಳನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು. ಯಾಕಾಗಿ ಬಸ್ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಬಸ್ ನಿಲ್ದಾಣದಲ್ಲಿ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ರ್ಯಾಲಿ ಕುರಿತು ಮಾಧ್ಯಮದೊಂದಿಗೆ ಮಾತನಾಡಿ  ಬಂದ್ ಮುಂದಿಟ್ಟುಕೊಂಡು ಸರ್ಕಾರ ರ್ಯಾಲಿಗೆ ತೊಂದರೆ ನೀಡಲು ಪ್ರಯತ್ನ ಮಾಡುತ್ತಿದೆ. ಗಲಾಟೆ ಇಲ್ಲದಿದ್ದರೂ ಬಸ್ ನಿಲ್ಲಿಸಿ ಜನರಿಗೆ ತೊಂದರೆ ಕೊಡುತ್ತಿದೆ. ರ್ಯಾಲಿಗೆ ಬರುವ ಬಸ್ ಗಳನ್ನು ತಡೆಯುವ ಕ್ಷುಲ್ಲಕ ರಾಜಕಾರಣ ಸಿದ್ದರಾಮಯ್ಯ ಮಾಡುತ್ತಿದ್ದಾರೆ.ಅದನ್ನು ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು. ಇದಕ್ಕೆಲ್ಲ ನಮ್ಮ ಕಾರ್ಯಕರ್ತರು ಬೆದರುವುದಿಲ್ಲ. ನಮ್ಮಲ್ಲಿ ಬುತ್ತಿ ತಂದಿಟ್ಟುಕೊಂಡು ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿದ್ದಾರೆ. ಸಮಾವೇಶಕ್ಕೆ 40 ರಿಂದ 50 ಸಾವಿರ ಜನರು ಬರುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಬಂದ್ ನಿಂದ ಜನ ಕಡಿಮೆ ಆಗಬಹುದು. ಆದರೂ ಜನರು ಬೈಕ್ ಮೂಲಕವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದರು.

ಒಟ್ಟಿನಲ್ಲಿ ನಗರದಲ್ಲಿ ಕನ್ನಡ ಪರ ಒಕ್ಕೂಟಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: