ಪ್ರಮುಖ ಸುದ್ದಿಮೈಸೂರು

ರಾಮದಾಸ್‍ರನ್ನು ಬಂಧಿಸಿ ಸಿಬಿಐ ತನಿಖೆಗೊಳಪಡಿಸಿ: ಎಂ.ಕೆ. ಸೋಮಶೇಖರ್

500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ನಗಣ್ಯ ಮಾಡುವ ವಿಷಯ ಮೊದಲೇ ತಿಳಿದಿತ್ತು. ನೋಟು ರಚನೆಗೆ ನಾನೇ ವಿನ್ಯಾಸ ಸಿದ್ಧಪಡಿಸಿ ಕಳುಹಿಸಿದ್ದೆ ಎಂದು ಮಾಜಿ ಸಚಿವ ರಾಮದಾಸ್ ಹೇಳಿಕೆ ನೀಡಿರುವುದು ಆರ್‌ಬಿಐನ ದೊಡ್ಡ ಭದ್ರತಾ ಲೋಪವಾಗಿದೆ. ಕೂಡಲೇ ರಾಮದಾಸ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಶಾಸಕ ಎಂ.ಕೆ. ಸೋಮಶೇಖರ್ ಒತ್ತಾಯಿಸಿದರು.

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಪ್ಪುಹಣ ಹಾಗೂ ಭ್ರಷ್ಟಾಚಾರ ತಡೆಗೆ 500 ಹಾಗೂ 1000 ರು. ನೋಟುಗಳನ್ನು ಅಮಾನ್ಯ ಮಾಡುವ ವಿಷಯ ರಾಮದಾಸ್ ಅವರಿಗೆ 4 ತಿಂಗಳ ಹಿಂದೆಯೇ ತಿಳಿದಿತ್ತು ಎಂದಾದರೆ ಇದು ಆರ್‌ಬಿಐನ ಬಹುದೊಡ್ಡ ಲೋಪ. ಅಲ್ಲದೆ, ಭದ್ರತೆಯ ದೃಷ್ಟಿಯಿಂದ ನೋಟಿನ ವಿನ್ಯಾಸಕ್ಕೆ 8 ಸಲಹೆಗಳನ್ನು ನೀಡಿದ್ದೇನೆ ಎಂದು ಸ್ವತಃ ರಾಮದಾಸ್ ಅವರೇ ಒಪ್ಪಿಕೊಂಡಿದ್ದರೂ ಆರ್‌ಬಿಐ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದನ್ನು ಗಮನಿಸಿದರೆ ಇದರಲ್ಲಿ ಆರ್‌ಬಿಐ ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಕೂಡಲೇ ರಾಮದಾಸ್ ಅವರನ್ನು ಬಂಧಿಸಿ ಸಿಬಿಐ ತನಿಖೆಗೊಳಪಡಿಸಿದರೆ ಸತ್ಯಾಸತ್ಯತೆ ತಿಳಿಯುತ್ತದೆ. ಅಲ್ಲದೆ ಈ ಎಲ್ಲ ಭದ್ರತಾ ಲೋಪಗಳಿಗೆ ಕಾರಣವಾಗಿರುವ ಆರ್‌ಬಿಐ ಗವರ್ನರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತಿರುವುದಾಗಿ ತಿಳಿಸಿದರು.

ಪ್ರಧಾನಿ ರಾಜೀನಾಮೆಗೆ ಒತ್ತಾಯ: ಕಪ್ಪುಹಣವನ್ನು ಹೊರತಂದು, ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನೇ ನಿದ್ರಾವಸ್ಥೆಗೆ ದೂಡಿದ್ದಾರೆ.  ತಮ್ಮವರಿಗೆಲ್ಲ ಗುಟ್ಟಾಗಿ ನೋಟುಗಳನ್ನು ರದ್ದು ಮಾಡುವ ವಿಷಯ ತಿಳಿಸಿ ಕಪ್ಪುಹಣ್ಣವನ್ನು ಬಿಳಿಯಾಗಿ ಪರಿವರ್ತಿಸಿಕೊಂಡು ಜನಸಾಮಾನ್ಯರನ್ನು ವಂಚಿಸಿದ್ದಾರೆ. ಬಡವರು ಕಷ್ಟಪಟ್ಟು ಬೆವರು ಸುರಿಸಿ ಕೂಡಿಟ್ಟ ಹಣವನ್ನು ಲೂಟಿ ಮಾಡಲು ಈ ಕ್ರಮ ಕೈಗೊಂಡಿದ್ದಾರೆ. ದೇಶದೆಲ್ಲೆಡೆ ಚಿಲ್ಲರೆ ಸಿಗದೆ ಸಾರ್ವಜನಿಕರು ಪರಿತಪಿಸುತ್ತಿದ್ದಾರೆ. ವ್ಯಾಪಾರಗಳೆಲ್ಲ ನೆಲಕಚ್ಚಿವೆ. ನೌಕರರಿಗೆ ಕೂಲಿ ಸಿಗುತ್ತಿಲ್ಲ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ದೇಶದ ವಿವಿಧೆಡೆ 60 ಜನ ಸಾವನ್ನಪ್ಪಿದ್ದಾರೆ. ಇಡೀ ದೇಶ ಇಂದೆಂದೂ ಕಂಡರಿಯದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಈ ಸ್ಥಿತಿಗೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನೂರಾರು ಕೋಟಿ ಬಿಳಿಯಾಗಿ ಪರಿವರ್ತನೆ: ರಾಮದಾಸ್ ಅವರಿಗೆ 4 ತಿಂಗಳ ಹಿಂದೆಯೇ ನೋಟುಗಳನ್ನು ನಿಷೇಧಿಸುವ ವಿಷಯ ತಿಳಿದಿದ್ದರಿಂದ ಬ್ಯಾಂಕುಗಳ ಮೂಲಕ ನೂರಾರು ಕೋಟಿ ಕಪ್ಪ ಹಣವನ್ನು ಬಿಳಿಯಾಗಿ ಪರಿವರ್ತಿಸಿಕೊಂಡಿದ್ದಾರೆ.  ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅವರ ಬ್ಯಾಂಕ್ ಖಾತೆ ಹಾಗೂ ನೋಟು ಬದಲಾವಣೆಯ ಮಾಹಿತಿ ಪಡೆದು ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದು ಗಂಭೀರ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸುನಿಲ್, ರವಿಶಂಕರ್, ವಿಶ್ವ ಇದ್ದರು.

ಮೈಸೂರಿನ ಆರ್‍ಬಿಐ ಕಚೇರಿ ಮಂದೆ ಪ್ರತಿಭಟನೆ: ಪ್ರಧಾನಿ ನರೇಂದ್ರ ಮೋದಿಯವರು ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೋಟು ರದ್ದು ಮಾಡಿರುವುದು ಉತ್ತಮ ಕಾರ್ಯ. ನೋಟು ನಿಷೇಧ ವಿಚಾರ ಯಾರಿಗೂ ತಿಳಿಯದಂತೆ ಗೌಪ್ಯತೆ ಕಾಪಾಡಿದ್ದೆವು ಎಂದು ಮೋದಿಯವರು ಭಾಷಣಗಳಲ್ಲಿ ಹೇಳಿದ್ದಾರೆ. ಆದರೆ, ಮಾಜಿ ಸಚಿವ ಎಸ್‍.ಎ. ರಾಮದಾಸ್ ಅವರಿಗೆ ನಾಲ್ಕು ತಿಂಗಳ ಹಿಂದೆಯೇ ನೋಟು ರದ್ದಾಗುವ ವಿಷಯ ತಿಳಿದಿತ್ತೆಂದು ಅವರೇ ಹೇಳಿಕೆ ನೀಡಿದ್ದಾರೆ. ನೋಟು ವಿನ್ಯಾಸಕ್ಕೆ ಸಲಹೆ ನೀಡಿದ್ದೇನೆ ಎಂದು ಕೂಡ ತಿಳಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿರುವ ಆರ್‍ಬಿಐ ಕಚೇರಿ ಮುಂಭಾಗದಲ್ಲಿ ಶಾಸಕ ಎಂ.ಕೆ. ಸೋಮಶೇಖರ್ ಪ್ರತಿಭಟನೆ ನಡೆಸಿದರು.

Leave a Reply

comments

Related Articles

error: