ಮೈಸೂರು

ಮಾನವ- ಪ್ರಾಣಿ ಸಂಘರ್ಷಕ್ಕೆ ಮೂಲ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ: ಪ್ರೊ. ಫುಲ್ ಗೋಪಾಲ್

ಮನೋವಿಜ್ಞಾನದ ಪ್ರಕಾರ ಮಾನವ ಪ್ರಾಣಿಗಳ ಸಂಘರ್ಷ ಎಂದರೆ ಪ್ರಾಣಿ – ಮನುಷ್ಯ ಎದುರಾದಾಗ ಪ್ರಾಣಿಯಾಗಲಿ ಮನುಷ್ಯನಾಗಲಿ ದೈಹಿಕವಾಗಿ ಅಥವಾ ಮಾನಸಿಕವಾಗಿ ಆಘಾತಗೊಳ್ಳುವುದು ಎಂದು ವನ್ಯಜೀವಿ ಅಪರಾಧ ನಿಗ್ರಹ ವಿಭಾಗದ ಅವರು ಹೇಳಿದರು.

ಮೈಸೂರು ಸೈನ್ಸ್ ಫೌಂಡೇಶನ್ ಶನಿವಾರದಂದು ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ 44 ನೇ ತಿಂಗಳ ವಿಜ್ಞಾನ ಉಪನ್ಯಾಸ ಮಾಲಿಕೆಯಲ್ಲಿ ‘ಮಾನವ-ಪ್ರಾಣಿ ಸಂಘರ್ಷ ಮತ್ತು ಪ್ರಾಣಿಗಳ ಕಳ್ಳ ಸಾಗಾಣಿಕೆ’ ಎಂಬ ವಿಷಯ ಕುರಿತು ಮಾತನಾಡಿದರು.

ನಮ್ಮ ಮನೆಗೆ ಬರುವ ಹಾವು, ಚೇಳು, ಕಪ್ಪೆ ಇವುಗಳಿಗೆ ನಾವು ಭಯಭೀತರಾಗುತ್ತೇವೆ. ಇವು ಸಂಘರ್ಷವೇ ಆದರೆ ನಮಗಿಂತ ಹೆಚ್ಚು ಅವು ಹೆದರಿರುತ್ತವೆ. ಅವುಗಳನ್ನು ಕೊಲ್ಲುವ ಬದಲು ಅವು ಹೋಗಲು ಅವಕಾಶ ಮಾಡಿಕೊಟ್ಟರೆ ತಾವಾಗಿಯೇ ಹೋಗುತ್ತವೆ. ಅವು ನಮ್ಮನ್ನು ಕಚ್ಚುವ ಉದ್ದೇಶದಿಂದ ಬಂದಿರುವುದಿಲ್ಲ ಎಂದರು.

ಆನೆ ಕಬ್ಬಿನ ಗದ್ದೆಗೆ ನುಗ್ಗಿ ಬೆಳೆ ಹಾನಿಮಾಡಿತು, ಕಾಡು ಹಂದಿಗಳು ಗದ್ಡೆಗೆ ನುಗ್ಗಿವೆ. ಚಿರತೆ ಮನೆಗೆ ನುಗ್ಗಿ ದನಕರು ಹೊತ್ತೊಯ್ದಿದೆ, ತೋಳ ರಸ್ತೆಗೆ ಬಂದು ಕಾರಿಗೆ ಸಿಕ್ಕಿ ಸತ್ತಿದೆ… ಹೀಗೆ ಪ್ರತಿದಿನ ಒಂದಲ್ಲ ಒಂದು ಮಾನವ- ಪ್ರಾಣಿ ಸಂಘರ್ಷ ನಡೆಯುತ್ತಿದೆ. ಇವೆಲ್ಲವುಗಳಿಗೆ ಮೂಲ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ. ಜನಸಂಖ್ಯೆ ಹೆಚ್ಚಳದಿಂದ ಕಾಡುಗಳು ನಾಶಗೊಂಡು ಮನೆಗಳು ನಿರ್ಮಾಣಗೊಳ್ಳುತ್ತಿವೆ. ಕಾಡುಗಳನ್ನು ಹೊಲ-ಗದ್ದೆಗಳಾಗಿ ಪರಿವರ್ತಿಸಿ ಬೆಳೆ ಬೆಳೆಯುತ್ತಿದ್ದಾರೆ. ಅವುಗಳ ವಾಸಸ್ಥಳವನ್ನು ನಾವು ಆಕ್ರಮಿಸಿ, ಪ್ರಾಣಿಗಳು ಮುನುಷ್ಯನ ಮೇಲೆ ದಾಳಿ ಮಾಡುತ್ತಿವೆ, ಹೊಲಗದ್ದೆಗಳಿಗೆ ನುಗ್ಗುತ್ತಿವೆ ಎಂದು ಅವುಗಳ ಮೇಲೆ ಅಪರಾಧ ಹೊರಿಸುತ್ತಿದ್ದೇವೆ. ಹುಲಿ, ಚಿರತೆಗಳ ಸಂಖ್ಯೆ ಹೆಚ್ಚುತ್ತಿವೆ ಅವನ್ನು ಹಿಡಿಯಿರಿ, ಸ್ಥಳಾಂತರಿಸಿ ಎಂದು ಕೂಗಾಡುತ್ತಿದ್ದೇವೆ. ಆದರೆ ಯಾರೊಬ್ಬರು ಮನುಷ್ಯನ ಸಂಖ್ಯೆ ಹೆಚ್ಚುತ್ತಿದೆ ಇದರಿಂದಾಗಿ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂದು ಯಾರೊಬ್ಬರು ಮಾತನಾಡುವುದಿಲ್ಲ ಎಂದು ಹೇಳಿದರು.

ಅಷ್ಟೇ ಅಲ್ಲದೇ, ಟೂರಿಸಂ ಹೆಸರಿನಲ್ಲಿ ಅನೇಕ ಅನಧಿಕೃತ ಹೋಂ ಸ್ಟೇಗಳು, ರೆಸಾರ್ಟ್ ಗಳು ಕಾಡಿನ ಮಧ್ಯೆ ತಲೆ ಎತ್ತುತ್ತಿವೆ. ಇವುಗಳು ಕಾಡು ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ತೊಂದರೆ ಮಾಡುತ್ತಿವೆ ಮತ್ತು ಪ್ರಾಣಿಗಳ ಕಳ್ಳ ಸಾಗಾಣಿಕೆಯಲ್ಲೂ ತೊಡಗುತ್ತಿವೆ. ಇವುಗಳನ್ನು ತೆರವು ಮಾಡಿಸುವುದು ಇಲಾಖೆಗೆ ಕಷ್ಟಕರವಾಗಿದೆ. ಇದಕ್ಕೆ ಕಾರಣ ಅವುಗಳು ಪ್ರಭಾವಿ ವ್ಯಕ್ತಿಗಳದ್ದಾಗಿರುತ್ತದೆ ಎಂದು ಹೇಳಿದರು.

ಪ್ರಾಣಿಗಳ ಕಳ್ಳ ಸಾಗಾಣಿಕೆ ಒಂದು ದಂಧೆಯಾಗಿ ಮಾರ್ಪಟ್ಟಿದೆ. ಪ್ರಾಣಿಗಳ ಹಲ್ಲು, ಮಾಂಸ, ಚರ್ಮಕ್ಕಾಗಿ ಬೇಟೆಯಾಡುವುದು. ಅವುಗಳನ್ನು ಹಣದ ಆಸೆಗೆ ವಿದೇಶಕ್ಕೆ ಮಾರಾಟ ಮಾಡುವ ದೊಡ್ಡ ಜಾಲವೇ ಭಾರತದಲ್ಲಿದೆ. ಕರ್ನಾಟಕದಲ್ಲೂ ಸಹ ಇಂತಹ  ಪ್ರವೃತ್ತಿಗಳು ಹೆಚ್ಚುತ್ತಿವೆ. ಇವುಗಳ ತಡೆಗೆ ನಮ್ಮ ಸರ್ಕಾರ ಇನ್ನೂ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಲ್ಲದೇ ಎನ್.ಜಿ.ಓ.ಗಳು ಮತ್ತು ಯುವಕರು ಇವುಗಳ ತಡೆಗೆ ಸಹಕರಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಕೃಷ್ಣೇಗೌಡ ವಹಿಸಿದ್ದರು. ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್, ಸಿ.ಪುರಂದರ್, ವೈಜಯಂತಿ, ಶ್ರೀಕಂಠಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: