ಮೈಸೂರು

ಬೃಹತ್ ಶೋಭಾ ಯಾತ್ರೆಗೆ ಬಿ.ಎಸ್.ಯಡಿಯೂರಪ್ಪ ಚಾಲನೆ

ಮೈಸೂರು,ಜ.25:- ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ಮಾಜಿ ಸಚಿವ ರಾಮದಾಸ್ ನೇತೃತ್ವದಲ್ಲಿ ಬೃಹತ್ ಶೋಭಾ ಯಾತ್ರೆಗೆ ಮಾಜಿ ಮುಖ್ಯಮಂತ್ರಿ,ಬಿಜೆಪಿ ರಾಜಾಧ್ಯಕ್ಷ   ಬಿ.ಎಸ್.ಯಡಿಯೂರಪ್ಪ ಗನ್ ಹೌಸ್ ವೃತ್ತದ ಬಳಿ ಚಾಲನೆ ನೀಡಿದರು. ಇದೊಂದು ಐತಿಹಾಸಿಕ ದಾಖಲೆಯ ಬೃಹತ್ ಶೋಭಾ ಯಾತ್ರೆಯಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮದಾಸ್ ಮಾತನಾಡಿ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ. ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ರಾಜಕೀಯ ಪ್ರೇರಿತವಾಗಿದೆ. ಮುಖ್ಯಮಂತ್ರಿಗಳ ಈ ಕುತಂತ್ರದ ಬಂದ್ ಗೆ ಜನರು ಬೆಂಬಲ ನೀಡುವುದಿಲ್ಲ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಆಗಮಿಸಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಜನರು ಬಾರದಂತೆ ಬಸ್ ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದ ಸಮಾರಂಭಕ್ಕೆ ಯಾವುದೇ ರೀತಿಯ ತೊಂದರೆಯಾಗದು. ಈ ಕಾರ್ಯಕ್ರಮಕ್ಕೆ ನರಸಿಂಹರಾಜ, ಚಾಮರಾಜ, ಕೃಷ್ಣರಾಜ, ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಆಗಮಿಸುವರು. ಈ ಬಂದ್ ನಮ್ಮ ಸಮಾರಂಭಕ್ಕೆ ಧಕ್ಕೆಯಾಗದು. ಕಾರ್ಯಕರ್ತರು ಕಾಲ್ನಡಿಗೆಯಿಂದಲೇ ಆಗಮಿಸುವರು ಎಂದರು.
ಸುಮಾರು 500ಕ್ಕೂ ಹೆಚ್ಚು ಆಟೋ ಚಾಲಕರು, ಅಸಂಘಟಿತ ವಲಯದ ಕಾರ್ಮಿಕರು, ಪರಿವಾರ ನಾಯಕರು, ಗೋ ಹತ್ಯೆ ನಿಷೇಧ ಒತ್ತಾಯಕ್ಕಾಗಿ ಗೋ ಪಾಲಕರು, ಬ್ರಾಹ್ಮಣ ಮಹಾಸಮಾಜದವರು, ಡಿಎಲ್ ಇಲ್ಲದಿರುವ ವಾಹನ ಚಾಲಕರು ಸೇರಿದಂತೆ 50 ಸಾವಿರ ಕಾರ್ಯಕರ್ತರು ಸಮಾರಂಭಕ್ಕೆ ಭಾಗವಹಿಸುವ ನಿರೀಕ್ಷೆ ಇದೆ. ಅಮಿತ್ ಷಾ ಅವರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಒಂದು ಲಾರಿ ಲೋಡ್ ಮರಳಿಗೆ 7 ಸಾವಿರ ನಿಗದಿ ಮಾಡಲಾಗಿತ್ತು. ಆದರೇ ಕಾಂಗ್ರೆಸ್ ಸರ್ಕಾರ ಮಲೇಷ್ಯಾದಿಂದ ಅಕ್ರಮವಾಗಿ ಮರಳು ತರಿಸಿ 50 ಸಾವಿರ ರೂಗಳಿಗೆ ಒಂದು ಲಾರಿ ಮರಳು ನೀಡುತ್ತಿದೆ. ಇದು ಬಡವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ರಾಜ್ಯದಲ್ಲಿ ಮರಳು ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: