ನಮ್ಮೂರುಮೈಸೂರು

ಆಚಾರ್ಯ ವಿದ್ಯಾರಣ್ಯರು ಈಗ ಇದ್ದಿದ್ದರೆ ನೋಟು ರದ್ದಾಗುತ್ತಿರಲಿಲ್ಲ: ಹಿರಿಯ ವಕೀಲ ಶಾಮಭಟ್

ಆಚಾರ್ಯ ವಿದ್ಯಾರಣ್ಯರು ಈಗ ಇದ್ದಿದ್ದರೆ 500 ಮತ್ತು 1000 ರು. ನೋಟು ರದ್ದಾಗುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಹಿರಿಯ ವಕೀಲ ಶಾಮಭಟ್ ಅವರು ಅಭಿಪ್ರಾಯಪಟ್ಟರು.

ಭಾನುವಾರದಂದು ಮೈಸೂರಿನ ರೋಟರಿ ಸಭಾಂಗಣದಲ್ಲಿ ನಡೆದ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಆಚಾರ್ಯ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಆಡಳಿತದ ಸಮಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದ್ದರು. ಸಾಮಾಜಿಕ ಭದ್ರತಾ ನಿಯಮಗಳನ್ನು ಜಾರಿಗೆ ತಂದು, ವಿದೇಶಿಗರು ಹಣ ಹೂಡಿಕೆ ಮಾಡದಂತೆ ಕೆಲ ಯೋಜನೆಗಳನ್ನು ಜಾರಿಗೆ ತಂದಿದ್ದರು. ಗೌಪ್ಯವಾಗಿಡಲಾಗಿದ್ದ ಸಂಪತ್ತು ಬಳಸಿ ದೇಶಿಯ ಹೂಡಿಕೆ ಆರಂಭಿಸಿ ಹಲವು ವಾಣಿಜ್ಯ ಚಟುವಟಿಕೆಗಳು ನಡೆಯಲು ಕಾರಣರಾಗಿದ್ದರು.

ವಿದ್ಯಾರಣ್ಯರು ಆರಂಭಿಸಿದ್ದ ವಿದೇಶಿ ಬಂಡವಾಳ ಹೂಡಿಕೆ ಯೋಜನೆ ಬಗ್ಗೆ ಮಾತನಾಡಿ, ವಿದೇಶಿ ಹೂಡಿಕೆ ತಡೆಗಟ್ಟಲು ನೋಟು ಮತ್ತು ನಾಣ್ಯಗಳ ಮೇಲೆ ‘ವರಾಹ’ದ ಲೋಗೋ ಬಳಸುವಂತೆ ಕಾನೂನು ತಜ್ಞರಿಗೆ ಸೂಚಿಸಿದ್ದರು. ಆದರೆ, ಈಗ ಪರಿಸ್ಥಿತಿ ಬಿಗಡಾಯಿಸಿದೆ. ದೇಶದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಯಂತ್ರಿಸಲು ಹಲವಷ್ಟು ಮಾರ್ಗಗಳು ಇದ್ದರೂ ಪ್ರಧಾನಿ ಮೋದಿ ಅವರು ಅಪಾಯಕಾರಿ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಹೇಳಿದರು.

ತೆರಿಗೆ ಬಗ್ಗೆ ಜನರಿಗೆ ಮೊದಲೇ ತಿಳುವಳಿಕೆ ಕೊಟ್ಟಿದ್ದರೆ, ನೋಟು ನಿಷೇಧದಿಂದ ಜನರ ದುಡ್ಡು ಕಪ್ಪುಹಣವಾಗಿ ಪರಿವರ್ತನೆಯಾಗುತ್ತಿರಲಿಲ್ಲ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಸರಕಾರ ಅತ್ಯಂತ ಜಾಗರೂಕ ಹೆಜ್ಜೆಗಳನ್ನಿಡಬೇಕೆಂದು ಶಾಮಭಟ್ ಅವರು ಅಭಿಪ್ರಾಯಪಟ್ಟರು.

ಸಂಸ್ಕೃತಿ ಪ್ರಚಾರಕ ಕೆ. ರಘುರಾಮ್, ಹಿರಿಯ ಸಾಹಿತಿ ಪುಷ್ಪಾ ಐಯ್ಯಂಗಾರ್, ಮೈಸೂರು ಗೋವು ಸೇವಾ ಆಯೋಗದ ಉಪಾಧ್ಯಕ್ಷ ಡಾ.ಕೆ.ಎಸ್. ಮಿತ್ತಲ್ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: