ಪ್ರಮುಖ ಸುದ್ದಿಮೈಸೂರು

‘ದ ಗ್ಲೋರಿ ಆಫ್ ಹೊಯ್ಸಳ ಟೆಂಪಲ್’ ಪುಸ್ತಕ ಬಿಡುಗಡೆ

ಎಲ್. ಮಧುರನಾಥ್ ಅವರ ‘ದ ಗ್ಲೋರಿ ಆಫ್ ಹೊಯ್ಸಳ ಟೆಂಪಲ್’ ಅನುವಾದಿತ ಇಂಗ್ಲಿಷ್ ಕೃತಿ ಬಿಡುಗಡೆ ಸಮಾರಂಭವು ಭಾನುವಾರದಂದು ರಂಗಾಯಣದ ಮನೆಯಂಗಳದಲ್ಲಿ ನಡೆಯಿತು. ಡಿ.ಎಸ್. ಪ್ರಕಾಶ್ ಈ ಪುಸ್ತಕವನ್ನು ಅನುವಾದಿಸಿದ್ದು, ‘ದೇಗುಲ ಕಲಾವಿಭಾವ’ ಎಂಬ ಕನ್ನಡ ಪುಸ್ತಕವನ್ನು ಸಹ ಅವರೇ ಬರೆದಿದ್ದಾರೆ.

ಮೈಸೂರಿನ ಮಾ ಪ್ರಭಾ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಈ ಅನುವಾದಿತ ಪುಸ್ತಕವು 12ನೇ ಶತಮಾನದ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ಆಳ್ವಿಕೆಯ ಕಾಲದಲ್ಲಿ ನಿರ್ಮಿತವಾದ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ಐತಿಹಾಸಿಕ ದೇವಾಲಯಗಳನ್ನು ಯಾವ ರೀತಿಯಲ್ಲಿ ನಿರ್ಲಕ್ಷ್ಯಿಸಲಾಗಿದೆ ಎಂಬುದರ ಬಗ್ಗೆ ಕೂಡ ಬೆಳಕನ್ನು ಚೆಲ್ಲುವುದು.

ಐತಿಹಾಸಿಕ ದೇವಾಲಯಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡುವುದರ ಜತೆಗೆ ಪ್ರವಾಸಿಗರಿಂದ ಸ್ಮಾರಕಗಳು ಹಾಳಾಗುತ್ತಿದೆ ಎಂಬ ಬಗ್ಗೆ ಹೇಳಿದ್ದಾರೆ. ಗತಕಾಲದ ಕಥೆಗಳನ್ನು ಹೇಳುವ ಹಲವಾರು ಐತಿಹಾಸಿಕ ದೇವಸ್ಥಾನಗಳು ನಾಶವಾಗಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತು ಶ್ರವಣ ಬೆಳಗೊಳದಲ್ಲಿ ನಿರ್ಮಾಣವಾಗಿರುವ ಎಲ್ಲ ದೇವಸ್ಥಾನಗಳ ಬಗ್ಗೆಯೂ ಈ ಪುಸ್ತಕ ಮಾಹಿತಿ ನೀಡುತ್ತದೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕ ಡಾ. ಗವಿಸಿದ್ದಯ್ಯ ಅವರು ಮಾತನಾಡಿ, ಸ್ಮಾರಕಗಳು ನಮ್ಮ ಸಂಸ್ಕೃತಿ ಮತ್ತು ಆಚಾರಗಳನ್ನು ಪ್ರತಿನಿಧಿಸುತ್ತವೆ. ಅವುಗಳನ್ನು ಸುರಕ್ಷಿತವಾಗಿ ನೋಡಿಕೊಂಡು ನಮ್ಮ ಮುಂದಿನ ಜನಾಂಗಕ್ಕೂ ನೋಡಲು ಅವಕಾಶ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ಮಾರಕಗಳ ನಾಶದಿಂದ ಅವುಗಳೊಂದಿಗಿದ್ದ ಸಂಸ್ಕೃತಿ ಮತ್ತು ನೆನಪುಗಳು ಮರೆಯಾಗುತ್ತವೆ. ನಮ್ಮ ಇತಿಹಾಸ ನಾಶಕ್ಕೆ ನಾವೇ ಸ್ವತಃ ಕಾರಣಕರ್ತರಾಗುತ್ತೇವೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‍.ಪಿ. ಜನಾರ್ದನ್, ಡಾ.ವೈ.ಸಿ. ಭಾನುಮತಿ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: