ಕರ್ನಾಟಕ

ರೈಲು ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಜನಸಂದಣಿ ಇರುವ ಎಲ್ಲ ಸ್ಥಳಗಳಲ್ಲೂ ಇಂದಿರಾ ಕ್ಯಾಂಟಿನ್‌ : ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ(ಬೆಂಗಳೂರು) ಜ. 26:- ನಗರದ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ರೈಲು ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಜನಸಂದಣಿ ಇರುವ ಎಲ್ಲ ಸ್ಥಳಗಳಲ್ಲೂ ಇಂದಿರಾ ಕ್ಯಾಂಟಿನ್‌ಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಲ್ಲಿ ಪ್ರಕಟಿಸಿದ್ದಾರೆ.

198 ವಾರ್ಡ್‌ಗಳಲ್ಲಿ ಎಲ್ಲೆಲ್ಲಿ ಇಂದಿರಾ ಕ್ಯಾಂಟಿನ್‌ಗಳ ಅವಶ್ಯಕತೆ ಇದೆಯೋ ಅಲ್ಲಲ್ಲಿ ಕ್ಯಾಂಟಿನ್‌ಗಳನ್ನು ಆರಂಭಿಸಲು ಸರ್ಕಾರ ಎಷ್ಟು ಬೇಕಾದರೂ ಅನುದಾನವನ್ನು ನೀಡಲು ಸಿದ್ಧವಿದೆ ಎಂದು ಹೇಳಿದರು. ವಿಧಾನಸೌಧದ ಮುಂಭಾಗ 14 ಸಂಚಾರಿ ಇಂದಿರಾ ಕ್ಯಾಂಟಿನ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ಅದರಲ್ಲೂ ಕಡು ಬಡವರು ಹಸಿವಿನಿಂದ ಬಳಲಬಾರದು. ಅದಕ್ಕಾಗಿ ರಿಯಾಯಿತಿ ದರದಲ್ಲಿ ಇಂದಿರಾ ಕ್ಯಾಂಟಿನ್‌ಗಳ ಮೂಲಕ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು. ಆರಂಭದಲ್ಲಿ ಇಂದಿರಾ ಕ್ಯಾಂಟಿನ್‌ಗಳನ್ನು ಆರಂಭಿಸಲಾಯಿತಾದರೂ ಬಹುತೇಕ ವಾರ್ಡ್‌ಗಳಲ್ಲಿ ಜಾಗದ ಕೊರತೆಯಿಂದ ಆರಂಭಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಸಂಚಾರಿ ಇಂದಿರಾ ಕ್ಯಾಂಟಿನ್‌ಗಳಿಗೆ ಚಾಲನೆ ನೀಡಲಾಗುತ್ತಿದೆ ಇಂದಿರಾ ಕ್ಯಾಂಟಿನ್‌ಗಳಲ್ಲಿ ಗುಣಮಟ್ಟದ ಆಹಾರ ಹಾಗೂ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಸೂಚನೆ ನೀಡಿದರು. ಇಂದಿರಾ ಕ್ಯಾಂಟಿನ್‌ಗಳಲ್ಲಿ ಪ್ರತಿನಿತ್ಯ 2 ಲಕ್ಷಕ್ಕೂ ಹೆಚ್ಚು ಜನರು ಆಹಾರ ಸೇವಿಸುತ್ತಿದ್ದಾರೆ. ಈವರೆಗೆ ಎರಡೂವರೆ ಕೋಟಿ ಜನರು ಊಟ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ಇಂದಿರಾ ಕ್ಯಾಂಟಿನ್ ವಾಹನಕ್ಕೆ 8.50 ಲಕ್ಷ ವೆಚ್ಚವಾಗಿದ್ದು, ಟೆಂಡರ್ ಆಧಾರದ ಮೇಲೆ 5.50 ಲಕ್ಷ ಮೊತ್ತದಲ್ಲಿ ಒಳ ಮತ್ತು ಹೊರ ವಿನ್ಯಾಸ ಮಾಡಲಾಗಿದೆ ಎಂದು ತಿಳಿಸಿದರು. 198 ವಾರ್ಡ್‌ಗಳ ಪೈಕಿ 174 ವಾರ್ಡ್‌ಗಳಲ್ಲಿ ಮಾತ್ರವೇ ಇಂದಿರಾ ಕ್ಯಾಂಟಿನ್‌ಗೆ ಕಟ್ಟಡಗಳು ಲಭ್ಯವಾಗಿದೆ. ಉಳಿದ 24 ವಾರ್ಡ್‌ಗಳಲ್ಲಿ ಸ್ಥಳದ ಕೊರತೆಯಿಂದ ಸಂಚಾರಿ ಇಂದಿರಾ ಕ್ಯಾಂಟಿನ್‌ನ್ನು ಆರಂಭಿಸಲಾಗಿದೆ ಎಂದು ಹೇಳಿದರು. 24 ಸಂಚಾರಿ ಇಂದಿರಾ ಕ್ಯಾಂಟಿನ್‌ನಿಂದ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ 500 ನಾಗರಿಕರಿಗೆ ಆಹಾರದ ಸೌಲಭ್ಯ ನೀಡಬಹುದಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಮೇಯರ್ ಸಂಪತ್ ರಾಜ್, ಉಪ ಮೇಯರ್ ಪದ್ಮಾವತಿ ನರಸಿಂಹ ಮೂರ್ತಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ವಿಧಾನ ಪರಿಷತ್ ಸದಸ್ಯ ಸಿ.ಆರ್ ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ರಿಜ್ವಾನ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: