ಮೈಸೂರು

ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಕಟ್ಟಲು ಮುಂದಾಗಿ: ಬನ್ನೂರು ಕೆ.ರಾಜು

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದರಿಂದ ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಸಾಹಿತಿ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.

ಭಾನುವಾರ ಸರ್.ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಚೇರಿಯಲ್ಲಿ ಸಂಘದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ತನ್ನದೇ ಆದ ಪ್ರಾಮುಖ್ಯಕತೆ ಪಡೆದುಕೊಂಡಿದೆ. ಕನ್ನಡದಲ್ಲೇ ಓದಿದ  ಸರ್.ಎಂ.ವಿಶ್ವೇಶ್ವರಯ್ಯ, ಸಿವಿ ರಾಮನ್ ವಿಶ್ವಮಟ್ಟದಲ್ಲಿ ಬೆಳಗಿದ್ದಾರೆ. ಮೂರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದವರು ಕನ್ನಡ ಮಾಧ್ಯಮದಲ್ಲೇ ಓದಿದವರು. ಆದರೆ ಕೆಲವರು ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದಿದರೆ ಸರ್ಕಾರಿ ನೌಕರಿ ಸಿಗುವುದಿಲ್ಲ ಎಂಬ ಭ್ರಮೆ ಮೂಡಿಸುತ್ತಿದ್ದು ಸಾರ್ವಜನಿಕರು ಈ ಭ್ರಮೆಯಿಂದ ಹೊರಬಂದು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವಾಸ್ತವವಾಗಿ ಕನ್ನಡ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ. ಖಾಸಗಿ ಶಾಲಾ ಶಿಕ್ಷಕರಿಗಿಂತ ಸರ್ಕಾರಿ ಶಾಲೆಗಳ ಶಿಕ್ಷಕರು ಶ್ರೇಷ್ಠರು. ಖಾಸಗಿ ಶಾಲಾ ಶಿಕ್ಷಕರು ಸರ್ಕಾರಿ ನೌಕರಿ ಸಿಗದೆ ಕಡಿಮೆ ಸಂಬಳಕ್ಕೆ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವುದರಿಂದ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ ಖಾಸಗಿ ಶಾಲೆಗಳು ಅಧಿಕ ಅಂಕಗಳಿಸಿದವರಿಗೆ ಮಾತ್ರ ಪ್ರವೇಶ ನೀಡುವುದರಿಂದ ಹೆಚ್ಚು ಫಲಿತಾಂಶ ಸಾಧಿಸುವುದು ದೊಡ್ಡ ಸಾಧನೆ ಏನಲ್ಲ. ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ಹಾಗೂ ಇಂಗ್ಲಿಷ್ ವ್ಯಾಮೋಹದಿಂದ ಹೊರಬಂದು ಕನ್ನಡ ಕಟ್ಟಲು ಮುಂದಾಗಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ರಂಗಕರ್ಮಿ ನಾ.ನಾಗಚಂದ್ರ, ಇಂದು ನಿಜವಾದ ಕನ್ನಡ ಉಳಿದಿರುವುದು ಸಾಮಾನ್ಯ ಹಾಗೂ ಶ್ರಮಿಕ ವರ್ಗದವರ ಬಳಿ. ಎಲ್ಲರೂ ಭಾಷೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ತಮ್ಮ ಮಾತೃ ಭಾಷೆಯನ್ನೇ ಮರೆಯುತ್ತಿದ್ದಾರೆ. ಅಮ್ಮ ಎಂದು ಕರೆಸಿಕೊಳ್ಳುವ ಬದಲು ಮಮ್ಮಿ ಎಂದು ಕರೆಸಿಕೊಂಡು ಜೀವಂತ ಹೆಣವಾಗುತ್ತಿದ್ದಾರೆ. ಕನ್ನಡಿಗರಲ್ಲಿ ಇಂತಹ ಪರಭಾಷಾ ವ್ಯಾಮೋಹ ದೂರಾದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡಿಗರೆಲ್ಲರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಸಾಹಿತಿ ಬನ್ನೂರು ಕೆ.ರಾಜು ಹಾಗೂ ರಂಗಕರ್ಮಿ ನಾ.ನಾಗಚಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎನ್.ಚಂದ್ರು, ಸಂಘದ ಸದಸ್ಯರಾದ ಬಲ್ಲೇಗೌಡ, ಮಹೇಶ್, ಚಂದ್ರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: