ಕರ್ನಾಟಕಪ್ರಮುಖ ಸುದ್ದಿ

ಮರೆಯಾದ ಮತ್ತೊಂದು ತಾರೆ : ಮರಳಿಬಾರದ ಲೋಕಕ್ಕೆ ತೆರಳಿದ ನಟ ಚಂದ್ರಶೇಖರ್

ರಾಜ್ಯ(ಬೆಂಗಳೂರು)ಜ.27:- ಚಂದನವನದ ಮತ್ತೊಂದು ತಾರೆ ಮರೆಯಾಗಿದೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಖ್ಯಾತಿಯ ಹಿರಿಯ ನಟ ಚಂದ್ರಶೇಖರ್ ಮರೆಯಲಾರದ ನೆನಪುಗಳನ್ನು ಇರಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ.

ಪುಟ್ಟಣ್ಣ ಕಣಗಾಲ್ ಗರಡಿಯಿಂದ ಬಂದಂತಹ  ಕನ್ನಡದ ಹಿರಿಯ ನಟ ಚಂದ್ರಶೇಖರ್​  ಅವರು ಹೃದಯಾಘಾತದಿಂದ ಕೆನಡಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆನಡಾದಲ್ಲಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಪತ್ನಿ ಶೀಲಾ ಚಂದ್ರಶೇಖರ್ ಹಾಗೂ ಪುತ್ರಿ ತಾನ್ಯರನ್ನು, ಅಪಾರ ಅಭಿಮಾನಿಗಳನ್ನು,ಚಿತ್ರರಂಗದ ಸ್ನೇಹಿತರನ್ನು ಅಗಲಿದ್ದಾರೆ.  ನಮ್ಮ ಮಕ್ಕಳು ಎಂಬ ಚಿತ್ರದ ಮೂಲಕ ಬಾಲ ಪ್ರತಿಭೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಕನ್ನಡದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು,ಶ್ರೀನಾಥ್ ಜೊತೆ ಒಡನಾಟ ಹೊಂದಿದ್ದರು. ಮಾನಸ ಸರೋವರ,ಹಾಗೇ ಸುಮ್ಮನೆ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು.ಇವರ  ಕೊನೆಯ ಚಿತ್ರ ಇತ್ತೀಚೆಗೆ ತೆರೆಕಂಡ 3ಗಂಟೆ 30 ದಿನ 30 ಸೆಕೆಂಡ್ ಆಗಿದ್ದು, ಚಿತ್ರ ಬಿಡುಗಡೆಯ ವೇಳೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಹತ್ತು ದಿನಗಳ ಹಿಂದಷ್ಟೇ ಕೆನಡಾಕ್ಕೆ ತೆರಳಿದ್ದರು. ಡಾ.ರಾಜ್ ಕುಮಾರ್ ಅವರ ಜೊತೆ ‘ರಾಜ ನನ್ನ ರಾಜ’ ಚಿತ್ರದಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ನೀರವ ಮೌನ ಆವರಿದೆ. ಇತ್ತೀಚೆಗಷ್ಟೇ ನಟ, ನಿರ್ದೇಶಕ ಕಾಶೀನಾಥ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಇಂದು ಕಳಚಿಕೊಂಡಿದೆ. ಚಂದ್ರಶೇಖರ್ ನಿಧನಕ್ಕೆ ಚಿತ್ರತಾರೆಯರು, ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರು ಮರೆಯಾದರೂ ಅವರ ನೆನಪು ಮಾತ್ರ ಹಚ್ಚ ಹಸಿರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: