ಮೈಸೂರು

ಮತ್ತೆ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಎದುರಾಗಿದೆ ಹೊಸ ಸಮಸ್ಯೆ

vishnu-web-2ಡಾ. ವಿಷ್ಣುವರ್ಧನ್ ಸ್ಮಾರಕವನನ್ನು ಬೆಂಗಳೂರಿನ ಬದಲು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಸ್ಮಾರಕಕ್ಕೆ ಜಮೀನು ನೀಡಲು ಸಾಗುವಳಿದಾರು ಹಿಂದೇಟು ಹಾಕಿದ್ದು, ಈಗ ಮತ್ತೊಮ್ಮೆ ವಿಷ್ಣು ಸಮಾಧಿಗೆ ಜಾಗದ ಸಮಸ್ಯೆ ಎದುರಾಗಿದೆ.

ಮೈಸೂರಿನ ಹೆಚ್.ಡಿ. ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದ ಸರ್ವೇ ನಂ.8ರಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಐದು ಎಕ್ರೆ ಜಾಗವನ್ನು ನೀಡಲು ಸರ್ಕಾರ ನಿರ್ಧರಿಸಿತ್ತು. ಮಾನಂದವಾಡಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಜಾಗ ಸ್ಮಾರಕ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಭಾರತಿ ವಿಷ್ಣುವರ್ಧನ್ ಅವರೂ ಸಮ್ಮತಿಸಿದ್ದರಿಂದ ಸ್ಮಾರಕ ನಿರ್ಮಾಣಕ್ಕೆ ಇದ್ದ ಅಡ್ಡಿ ಆತಂಕಗಳೆಲ್ಲ ನಿವಾರಣೆಯಾದವು ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಇದೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. ಈ ಜಾಗವನ್ನು ಸುಮಾರು 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಗ್ರಾಮದ ಚೆಂಗಬಿಂಗಿ ಹನುಮನಾಯಕನ ಕುಟುಂಬ ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡುವುದಿಲ್ಲ. ಈ ಜಮೀನು ಬಿಟ್ಟರೆ ನಮ್ಮ ಜೀವನಕ್ಕೆ ಬೇರೆ ಯಾವುದೇ ಆಧಾರವಿಲ್ಲ. ಸರ್ಕಾರ ಜಮೀನು ಕಿತ್ತುಕೊಂಡರೆ ಆತ್ಮಹತ್ಯೆಯೊಂದೆ ದಾರಿ ಎಂದಿದ್ದಾರೆ.

ಸರ್ವೇ ನಂ.8ರಲ್ಲಿ ‘ಬಿ’ ಖರಾಬಿನ ಸುಮಾರು 88 ಎಕ್ರೆ ಜಮೀನಿದ್ದು ಇದನ್ನು 30 ಕುಟುಂಬಗಳು ಸಾಗುವಳಿ ಮಾಡುತ್ತಿವೆ. 1932ರ ದಾಖಲೆಗಳ ಪ್ರಕಾರ ಹಾಲಿ ಸಾಗುವಳಿ ಮಾಡುತ್ತಿರುವ ಹನುಮನಾಯಕ ಅವರ ಹೆಸರಿನಲ್ಲಿ 6.19 ಎಕ್ರೆ ಜಮೀನಿದ್ದು ಇದಕ್ಕೆ ಪೂರಕವಾಗಿ 1970ರಿಂದ ಕಂದಾಯ ಪಾವತಿಸಿರುವ ದಾಖಲೆಯೂ ಇದೆ. ಬರವಣಿಗೆಯ ಫಸಲು ಪಹಣಿ, ಇವರೇ ಭೂಮಾಲೀಕರು ಎಂದು ಪರಿಗಣಿಸಿ ಅರಣ್ಯ ಇಲಾಖೆ ಸಸಿಗಳನ್ನು ನೀಡಿದೆ. 88 ಎಕ್ರೆ ಜಮೀನಿನಲ್ಲಿ ಹನುಮನಾಯಕನ ಕುಟುಂಬ ಹೊರತುಪಡಿಸಿ ಉಳಿದೆಲ್ಲಾ ಅಕ್ಕಪಕ್ಕದ ಜಮೀನಿನವರಿಗೆ ಸರ್ಕಾರ ಬರವಣಿಗೆ ಪಹಣಿ ಮೇರೆಗೆ ಖಾತೆ ಮಾಡಿಕೊಟ್ಟಿದೆ. ಈ ವೇಳೆಗೆ ಬರವಣಿಗೆ ಪಹಣಿಯನ್ನು ಕಂಪ್ಯೂಟರೀಕರಣ ಮಾಡುವ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ ಹನುಮನಾಯಕ ತೀರಿಕೊಂಡಿದ್ದರಿಂದ ಈ ಕುಟುಂಬ ಪಹಣಿಯನ್ನು ಕಂಪ್ಯೂಟರೀಕರಣಗೊಳಿಸಿರಲಿಲ್ಲ. ಚೆಂಗಬಿಂಗಿ ಹನುಮನಾಯಕರ ಮೊಮ್ಮಗ ಸಣ್ಣಪ್ಪ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ತಾತನ ಕಾಲದಿಂದಲೂ ಈ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಜೀವನಕ್ಕೆ ಇದೇ ಆಧಾರ. ಸರ್ಕಾರ ಇಲ್ಲಿ ಈಗ ಸ್ಮಾರಕ ನಿರ್ಮಿಸಲು ಮುಂದಾಗಿದೆ. ನಾವು ನಮ್ಮ ಬದುಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ಸ್ಮಾರಕಕ್ಕೆ ಬೇರೆ ಜಾಗ ನೀಡಲಿ. ಇಲ್ಲವಾದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.

ಈ ಜಮೀನಿನಲ್ಲಿ ಹನುಮನಾಯಕ ಅವರ ಮಕ್ಕಳು-ಮೊಮ್ಮಕ್ಕಳು ಅನುಭೋಗದಾರರಾಗಿದ್ದಾರೆ. ಸರ್ಕಾರದ ದಾಖಲೆಗಳ ಪ್ರಕಾರ ‘ಬಿ’ ಖರಾಬು ಎಂದು ಗುರುತಿಸಿರುವ 6.19 ಎಕ್ರೆ ಜಮೀನಿನಲ್ಲಿ 5 ಎಕ್ರೆಯನ್ನು ಸ್ಮಾರಕಕ್ಕೆ ಎಂದು ನಿಗದಿಪಡಿಸಲಾಗಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ಹನುಮನಾಯಕ ಅವರ ಕುಟುಂಬ ಸದಸ್ಯರು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದು, ಮತ್ತೆ ವಿಷ್ಣು ಸ್ಮಾರಕ ನಿರ್ಮಾಣ ಕಗ್ಗಂಟಾಗುವಂತೆ ಗೋಚರಿಸುತ್ತಿದೆ.

ದಾಖಲೆಗಳ ಪ್ರಕಾರ ಹಾಲಾಳು ಸರ್ವೆ ನಂಬರ್ 8 ರಲ್ಲಿ ಖರಾಬು ಎಂದು ಗುರುತಿಸಿರುವ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲು ಪ್ರಕ್ರಿಯೆ ಆರಂಭಗೊಂಡಿದೆ. ಏತನ್ಮಧ್ಯೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಜಮೀನು ಅನುಭೋಗದಲ್ಲಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೂಹೂರ್ತ ಎಂದು ಕೈಗೂಡುವುದೋ ಕಾದು ನೋಡಬೇಕಿದೆ.

Leave a Reply

comments

Related Articles

error: