ಮೈಸೂರು

ಜೀವ ಸಂಕುಲಗಳ ಉಳಿವಿಗೆ ಮಣ್ಣು ಮತ್ತು ನೀರು ಅತ್ಯಗತ್ಯ : ಟಿ.ಪಿ.ನಟರಾಜ್

ಮೈಸೂರು,ಜ.29:- ಸಮಸ್ತ ಜೀವ ಸಂಕುಲಗಳ ಉಳಿವಿಗೆ ಮಣ್ಣು ಮತ್ತು ನೀರು ಅತ್ಯಗತ್ಯ, ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪ್ರಗತಿಪರ ಕೃಷಿಕ ಹಾಗೂ ಸಂಪನ್ಮೂಲ ವ್ಯಕ್ತಿ ಟಿ.ಪಿ.ನಟರಾಜ್ ತಿಳಿಸಿದರು.

ಅವರು ಪಿರಿಯಾಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಐಟಿಸಿ ಮತ್ತು ಮೈರಾಡಾ ಕಾವೇರಿ ಪ್ರಾದೇಶಿಕ ಸಂಸ್ಥೆಯವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತಾ ಅರಿವು ಕಾರ್ಯಗಾರದಲ್ಲಿ ಮಾತನಾಡಿದರು. ಮಣ್ಣು ಮತ್ತು ನೀರು ರೈತರ ಪಾಲಿನ ನಿಧಿಯಿದ್ದಂತೆ, ಇವೆರಡನ್ನು ಸಮರ್ಪಕವಾಗಿ ಪೋಷಣೆ ಹಾಗೂ ಸಂರಕ್ಷಣೆ ಮಾಡಬೇಕು, ಪರಿಸರದ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಾನಿಯಿಂದ ಪ್ರತಿವರ್ಷ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಭೂಮಿಯ ಮೇಲೆ ಮತ್ತು ಒಳಗೆ ವಾಸಿಸುತ್ತಿರುವ ಸಕಲ ಜಲಚರಗಳು ಅವನತಿಯ ಹಂತಕ್ಕೆ ತಲುಪುವ ಸಾಧ್ಯತೆಗಳಿರುವುದರಿಂದ ನೀರನ್ನು ಉಳಿಸುವ, ಮಿತವಾಗಿ ಬಳಸುವತ್ತ ಎಲ್ಲರೂ ಮುಂದಾಗಬೇಕಿದೆ, ಇಂದು ರೈತ ಅತ್ಯಧಿಕ ಇಳುವರಿ ಪಡೆಯುವ ನೆಪದಲ್ಲಿ ಭೂಮಿಗೆ ರಸಗೊಬ್ಬರ ಮತ್ತು ಕೀಟನಾಶಕವನ್ನು ಅತಿಯಾಗಿ ಬಳಸುತ್ತಿದ್ದಾನೆ, ಇವುಗಳನ್ನು ಬಳಸಿ ಉತ್ಪತಿಯಾದ ವಿಷಾಹಾರವನ್ನು ಸೇವಿಸಿ ತನ್ನ ಆರೋಗ್ಯವನ್ನು ತಾನೇ ಕಳೆದುಕೊಳ್ಳುತ್ತಿದ್ದಾನೆ ಎಂದು ವಿಷಾದಿಸಿದರು. ರೈತರು ಲಾಭದಾಸೆಗೆ ಬಲಿಯಾಗಿ ಸಾಲದ ಕೂಪಕ್ಕೆ ದೂಡುವ ತಂಬಾಕು ಮತ್ತು ಶುಂಠಿ ಬೆಳೆಗಳಿಗೆ ಪರ್ಯಾಯವಾಗಿ ಹೆಬ್ಬೆವು, ಸುರುಗಿ ಹಾಗೂ ಬಹುಬೆಳೆ ಹಾಗೂ ಮಿಶ್ರಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಹೈನುಗಾರಿಗೆ ಉತ್ತೇಜನ ನೀಡುವ ಮೇವು ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮತ್ತೊಬ್ಬ ಪ್ರಗತಿಪರ ಕೃಷಿಕ ಪಾಂಡವಪುರ ಮಂಜುನಾಥ್ ಮಾತನಾಡಿ ಜಗತ್ತಿನಲ್ಲಿರುವ ಶೇ.100 ನೀರಿನಲ್ಲಿ ಶೇ.1ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರು ದೊರೆಯುತ್ತಿದೆ, ಕೆರೆಗಳು ಗ್ರಾಮದ ಸಂಪತ್ತು, ಇವುಗಳನ್ನು ಎಲ್ಲರೂ ಸಂರಕ್ಷಿಸುವ ಅಗತ್ಯವಿದೆ, ಕೆರೆಗಳಿದ್ದರೆ ಅಲ್ಲಿ ಎಲ್ಲಾ ಜೀವರಾಶಿಗಳು, ಪಕ್ಷಿಗಳು, ಜಲಚರ ಜೀವಾಣುಗಳು ನೆಲೆನಿಂತು ನೀರನ್ನು ಶುದ್ಧೀಕರಿಸುತ್ತಿದ್ದವು. ಇದೇ ನೀರನ್ನು ಜನರು ಕುಡಿಯಲು, ಜಾನುವಾರುಗಳಿಗೆ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ಕೆ ಬಳಸಲಾಗುತ್ತಿತ್ತು, ಆಗ ಯಾವ ರೋಗಗಳು ಜನರನ್ನು ಬಾಧಿಸುತ್ತಿರಲಿಲ್ಲ, ಆದರಿಂದು ಪಿಲ್ಟರ್ ನೀರು ಕುಡಿದರೂ ರೋಗದಿಂದ ಮುಕ್ತರಾಗಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರುತ್ತಿದೆ, ಮಳೆ ಬಿದ್ದ ಸಂದರ್ಭದಲ್ಲಿ ಕೃಷಿಗೆ ಯೋಗ್ಯವಾದ ಮಣ್ಣು ಭೂಸವೆತದಿಂದ ಕೊಚ್ಚಿ ಹೋಗಿ ಭೂಮಿಯ ಫಲವತ್ತತೆ ಕ್ಷೀಣಿಸುತ್ತದೆ, ಅದಕ್ಕಾಗಿ ಭೂಮಿಗೆ ಒಡ್ಡುಗಳನ್ನು ನಿರ್ಮಿಸುವುದು, ಇಂಗುಗುಂಡಿಗಳನ್ನು ತೆರೆಯುವುದು ಸೇರಿದಂತೆ ಗಿಡಮರಗಳನ್ನು ಬೆಳಸಿ ಭೂ ಸವಕಳಿಯನ್ನು ತಪ್ಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿಅಧ್ಯಕ್ಷ ಎಂ.ಲೋಕೇಶ್, ಗ್ರಾ.ಪಂ.ಅಧ್ಯಕ್ಷ ಕಲ್ಕೆರೆ ಮಹದೇವ್, ಪಿಡಿಒ ರವಿಕುಮಾರ್, ನೆಲಜಲ ಸಂಸ್ಥೆಯ ಮುಖ್ಯಪ್ರವರ್ತಕ ಶಿವಸ್ವಾಮಿ, ಐಟಿಸಿ ಪ್ರೋಗ್ರಾಮ್ ಆಫೀಸರ್ ರಘುರಾಮ್, ಮೈಕ್ಯಾಪ್ಸ್ ತರಬೇತಿ ಅಧಿಕಾರಿ ದಯಾನಂದ್ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ರೇವಣ್ಣ, ರುದ್ರಪ್ಪ, ಮುಖಂಡರಾದ ಸೋಮೇಗೌಡ, ಲೋಕಪಾಲಯ್ಯ, ಮಹದೇವ್, ಕೆ.ಪಿ.ದೇವೇಂದ್ರ, ಕೇಶವಮೂರ್ತಿ, ರಮೇಶ್, ಪುಟ್ಟಮಣಿ, ಶಾಲೆಯ ಮುಖ್ಯೋಪಾಧ್ಯಾಯ ಸೋಮಶೇಖರ್, ಮೈಕ್ಯಾಪ್ಸ್‍ನ ಇಂಜಿನೀಯರ್ ವಿಜಯಕುಮಾರ್, ಸಮನ್ವಯಾಧಿಕಾರಿ ಶಂಕರ್, ಸಿಬ್ಬಂದಿಗಳಾದ ಪಿ.ಎನ್.ಹರೀಶ್, ಪಿ.ಎನ್.ಜಗದೀಶ್, ಡಿ.ಲ್.ಹರೀಶ್, ಸೇರಿದಂತೆ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: