ಮೈಸೂರು

ಸುವರ್ಣ ಸೌಧಕ್ಕೆ ಮುತ್ತಿಗೆ ಯತ್ನ : ಪೊಲೀಸರಿಂದ ತಡೆ

ಸತತ ಹಲವು ವರ್ಷಗಳ ಬರ ಮತ್ತು ಸುದೀರ್ಘ ಸಂಕಷ್ಟದ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಸಮಗ್ರ ಬರ ನಿರ್ವಹಣೆಗೆ ಒತ್ತಾಯಿಸಿ ರೈತರ ಕೃಷಿ, ಕಾರ್ಮಿಕರ ಮತ್ತು ಸ್ವಸಹಾಯ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಲು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಲೇಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಜನಶಕ್ತಿ, ಸ್ವರಾಜ್ ಅಭಿಯಾನ ಸಹಯೋಗದೊಂದಿಗೆ ನವೆಂಬರ್ 21ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟ ಕಾಲಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಸೋಮವಾರ ರೈತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ತೆರಳಿದ್ದಾರೆ. ವಿವಿಧೆಡೆಯಿಂದ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿರುವ ರೈತರನ್ನು ಅಲ್ಲಲ್ಲಿ ಪೊಲೀಸರು ತಡೆದು ನಿಲ್ಲಿಸಿದ ಘಟನೆಯೂ  ಸೋಮವಾರ ನಡೆದಿದೆ.

ಈ ಹಿಂದೆಯೇ ರೈತರು ರಾಜ್ಯ ಸರ್ಕಾರ ಆರ್ಥಿಕ ಜವಾಬ್ದಾರಿಯಲ್ಲಿ ಶೇ. 35ರಷ್ಟನ್ನು ಹೊತ್ತುಕೊಳ್ಳಬೇಕು. ಕೇಂದ್ರ ಸರ್ಕಾರ ಶೇ.65ರಷ್ಟನ್ನು ತೆಗೆದುಕೊಳ್ಳಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ವಾನುಮತದಿಂದ ಈ ಕುರಿತ ನಿರ್ಣಯವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದರು. ಆದರೆ ಸರ್ಕಾರ ರೈತರಿಗೆ ಯಾವುದೇ ಭರವಸೆಯನ್ನು ನೀಡದ ಕಾರಣ ಸುವರ್ಣ ಸೌಧಕ್ಕೆ ಸೋಮವಾರ ರೈತರು ಮುತ್ತಿಗೆ ಹಾಕಲು ತೆರಳಿದ್ದರು. ರಾಜ್ಯದ 139 ತಾಲೂಕುಗಳು ಈಗಾಗಲೇ ಬರ ಪೀಡಿತವೆಂದು ಘೋಷಣೆಯಾಗಿವೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಯೂ ಮಳೆಯ ತೀವ್ರ ಅಭಾವದಿಂದ ಆಣೆಕಟ್ಟೆಗಳು ತುಂಬಿಲ್ಲ. ಇದರಿಂದ ಸಮಗ್ರ ಬರ ನಿರ್ವಹಣೆ, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಮತ್ತು ಸಂಪೂರ್ಣ ಸಾಲಮನ್ನಾಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಇದೇ ವೇಳೆ ಕೆಲವು ರೈತರು ಅನಿರ್ದಿಷ್ಟ ಕಾಲಾವಧಿ ಧರಣಿಯಲ್ಲಿ ನಿರತರಾದರೆ, ಇನ್ಕೆಲವರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ತೆರಳಿದ್ದರು.

 

 

Leave a Reply

comments

Related Articles

error: