
ಮೈಸೂರು, ಜ.30 : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿವಾಳ ಮಾಚಿದೇವರ ಜಯಂತೋತ್ಸವ ಸಮಿತಿ ಸಂಯುಕ್ತವಾಗಿ ಫೆ.1ರಂದು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಶರಣ ‘ಮಡಿವಾಳ ಮಾಚಿದೇವರ’ ಜಯಂತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9ಕ್ಕೆ ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಡುವ ಬೃಹತ್ ಮೆರವಣಿಗೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡುವರು, ಚಿತ್ರದುರ್ಗದ ಮಡಿವಾಳ ಮಹಾಸಂಸ್ಥಾನದ ಮಠಾಧೀಶ ಶ್ರೀ ಬಸವ ಮಾಚಿದೇವರು ಸ್ವಾಮೀಜಿ ಪಾಲ್ಗೊಳ್ಳುವರು, ವಿವಿಧ ಕಲಾ ತಂಡಗಳೊಂದಿಗೆ ನಗರದ ಅಶೋಕ ರಸ್ತೆ, ಇರ್ವಿನ್ ರಸ್ತೆ, ಸಯ್ಯಾಜಿ ರಸ್ತೆ, ಸೇರಿದಂತೆ ಕೆ.ಆರ್.ವೃತ್ತದ ಮೂಲಕ ಜಗನ್ಮೋಹನ ಅರಮನೆ ತಲುಪಲಿವೆ ಎಂದು ಕಾರ್ಯಾಧ್ಯಕ್ಷ ಎಂ.ರಾಜು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಜಯಂತಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದು, ಶ್ರೀ ಬಸವಮಾಚಿದೇವರ ಸ್ವಾಮೀಜಿ ಸಾನಿಧ್ಯ ವಹಿಸುವರು, ಶಾಸಕ ವಾಸು ಅವರು ಅಧ್ಯಕ್ಷತೆ, ಸಚಿವ ತನ್ವೀರ್ ಸೇಠ್, ಮೇಯರ್ ಬಿ.ಭಾಗ್ಯವತಿ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿ.ಪಂ.ಅಧ್ಯಕ್ಷೆ ನಯಿಮಾ ಸುಲ್ತಾನ್, ಸಂಸದರಾದ ಪ್ರತಾಪ್ ಸಿಂಹ, ಆರ್.ಧ್ರುವನಾರಾಯಣ, ಸಿ.ಎಸ್.ಪುಟ್ಟರಾಜು ಸೇರಿದಂತೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕಳೆದ 30 ವರ್ಷದಿಂದ ನಡೆಸಿದ ಸಮುದಾಯದ ಹೋರಾಟಕ್ಕೆ ಸರ್ಕಾರ ಸ್ಪಂಧಿಸಿ ಮಾಚಿದೇವರ ಜಯಂತಿಯನ್ನು ಸರ್ಕಾರ ಮಟ್ಟದಲ್ಲಿ ಹಮ್ಮಿಕೊಂಡಿರುವುದಕ್ಕೆ ಸಿಎಂ ಸಿದ್ದರಾಮಯ್ಯನವರನ್ನು ಅಭಿನಂದಿಸಿ, ದೋಭಿ ಘಾಟ್ ಬಂದ್ ಮಾಡಿ ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಸಮಾಜದವರಲ್ಲಿ ಮನವಿ ಮಾಡಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಕೆ.ಎಂ.ವಸಂತಕುಮಾರಿ, ಅಧ್ಯಕ್ಷ ಚಂದ್ರಶೇಖರ ಬೈರಿ, ಸಮಾಜದ ಚೌಡಯ್ಯ, ದುದ್ದಗೆರೆ ಶಿವಣ್ಣ, ಮಲ್ಲೇಶ್ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)