ಕರ್ನಾಟಕ

ಮಧುಗಿರಿ ಪಟ್ಟಣಕ್ಕೆ ನೀರೊದಗಿಸುವ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದರೂ ಜನತೆ ನೀರಿಗಾಗಿ ಪರದಾಡುತ್ತಿರುವ ಪರಿಸ್ಥಿತಿ

ರಾಜ್ಯ(ತುಮಕೂರು)ಜ.30:- ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಯಲ್ಲಿ ಹೇಮಾವತಿಯಲ್ಲಿ ಮಳೆ ನೀರು  ಸಂಗ್ರಹವಾಗಿದ್ದರೂ ಕಳೆದ ಒಂದೂವರೆ ತಿಂಗಳಿನಿಂದ ಜನತೆ ನೀರಿಗಾಗಿ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಯ ಪಕ್ಕದಲ್ಲಿರುವ ಪಂಪ್‍ಹೌಸ್‍ನ 40 ಹೆಚ್.ಪಿ. ಎರಡು ಮೋಟಾರ್‍ಗಳು ಸುಟ್ಟು ಹೋಗಿ ತಿಂಗಳುಗಳೇ ಕಳೆದಿದ್ದರೂ ದುರಸ್ಥಿ ಮಾಡಿಸದ ಕಾರಣ ನೀರನ್ನು ಪಂಪ್ ಮಾಡಲು ಆಗುತ್ತಿಲ್ಲ. ಸಮೀಪದಲ್ಲೇ ಇರುವ ಹೇಮಾವತಿ ಜಲ ಸಂಗ್ರಹ ಕೇಂದ್ರದ ತೊಟ್ಟಿಗಳಲ್ಲಿ ನೀರು ತುಂಬಿ ಕೊಳೆಯುತ್ತಿದ್ದರೂ ಸ್ವಚ್ಛತೆ ಮಾಡದೇ ಇರುವುದರಿಂದ ದಾರಿಹೋಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಇದೆ. ಪಟ್ಟಣದಲ್ಲಿ ಈ ಮೊದಲು ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಒಂದು ವಾರವಾದರೂ ನೀರಿನ ಭಾಗ್ಯ ದೊರಕದಂತಾಗಿದೆ. ಈ ಸಮಸ್ಯೆ ಗೊತ್ತಿಲ್ಲದ ನಾಗರಿಕರು ವಾಟರ್‍ಮೆನ್‍ಗಳ ಮೇಲೆ ಜಗಳ ಕಾಯುವುದು ನಿತ್ಯ ಕಾಯಕವಾಗಿದೆ. ಈ ಎರಡು ಮೋಟಾರ್‍ಗಳನ್ನು ರಿಪೇರಿ ಮಾಡಲು ಭದ್ರಾವತಿಯಿಂದಲೇ ಕಾರ್ಮಿಕರು ಬರಬೇಕಾಗಿದೆ. ಆದರೆ ಹಿಂದಿನ ರಿಪೇರಿಯ ಬಾಬ್ತು 5 ಲಕ್ಷ ರೂ. ಬಾಕಿ ಇರುವುದರಿಂದ ಪುರಸಭೆಯವರು ಎಷ್ಟೇ ಗೋಗರೆದರೂ ಕಾರ್ಮಿಕರು ಬರುತ್ತಿಲ್ಲ. ಶಾಸಕ ಕೆ.ಎನ್.ರಾಜಣ್ಣ ಈ ಕೆರೆಗೆ ಹೇಮಾವತಿ ನೀರು ತುಂಬಿಸಲು ಬಳ್ಳಾಪುರ ಪಂಪ್ ಹೌಸ್ ಬಳಿ ಖಾಸಗಿ ವ್ಯಕ್ತಿಯೊಬ್ಬನನ್ನು ನೇಮಿಸಿ ಸ್ವಂತ ಹಣದಿಂದಲೇ ಸಂಬಳ ನೀಡಿ ರಾತ್ರಿ ಹಗಲು ನೀರು ತುಂಬಿಸಿದ್ದಲ್ಲದೆ ಪುರಸಭೆಗೆ ಹೊರೆಯಾಗಬಾರದೆಂದು ಕಟ್ಟಬೇಕಾಗಿದ್ದ ವಿದ್ಯುತ್ ಶುಲ್ಕವನ್ನು ರದ್ದುಪಡಿಸಿದ್ದಾರೆ. ಆದರೆ ಶಾಸಕರ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಸ್ಥಳೀಯ ಆಡಳಿತದ ವೈಖರಿಯಿಂದಾಗಿ ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಎನ್ನುವಂತೆ ನೀರಿದ್ದರೂ ಹಾಹಾಕಾರ ತಪ್ಪಿಲ್ಲ.

ಪಟ್ಟಣದ 23 ವಾರ್ಡ್‌ಗಳಲ್ಲಿ ಸರದಿಯಂತೆ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ ಕುಡಿಯುವ ನೀರಿನ ಬದಲಾಗಿ ಕೊಳವೆ ಬಾವಿಯ ನೀರನ್ನು ಕುಡಿಯುವಂತಾಗಿದೆ. ಹೇಮಾವತಿ ಜಲಸಂಗ್ರಹ ಕೇಂದ್ರದ ಬಾಗಿಲು ಹಾಕಿ ಎಷ್ಟೋ ದಿನಗಳು ಕಳೆದಿವೆ. ಹಗಲಿನ ವೇಳೆಯಲ್ಲಿಯೇ ದೀಪಗಳು ಉರಿಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇನ್ನು ನೀರು ನಿಂತು ಪಾಚಿ ಕಟ್ಟಿರುವುದರ ಜತೆಗೆ ಹುಳ ಹುಪ್ಪಡಿ, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಮೋಟರ್ ರಿಪೇರಿಯಾದ ತಕ್ಷಣ ಈಗಿರುವ ನೀರನ್ನೇ ಮೊದಲಿಗೆ ಬಿಡುವುದರಿಂದ ಸಾರ್ವಜನಿಕರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಈ ನೀರನ್ನೇ ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈಗಲಾದರೂ ಪುರಸಭೆಯವರು ಎಚ್ಚೆತ್ತುಕೊಂಡು ನೀರಿನ ಕೃತಕ ಅಭಾವವನ್ನು ಹೋಗಲಾಡಿಸಿ ಪರಿಶುದ್ದ ನೀರು ಕೊಡುವುದರ ಜತೆಗೆ ಸಾರ್ವಜನಿಕರ ತಾಳ್ಮೆ ಪರೀಕ್ಷೆ ಮಾಡದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ.

ಮೋಟಾರ್ ಕೆಟ್ಟು ಹೋಗಿ ಹಲವು ತಿಂಗಳುಗಳಾಗಿದ್ದು ಭದ್ರಾವತಿಯ ಕಾರ್ಮಿಕರಿಂದ ರಿಪೇರಿಗೆ ಬಾರದ ಕಾರಣ ಹುಬ್ಬಳ್ಳಿಯಿಂದ ಬೇರೆ ಕಾರ್ಮಿಕರನ್ನು ಕರೆಸಿ ದುರಸ್ತಿ ಮಾಡಿಸಿದ ನಂತರ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು. ಸಾಲು ಸಾಲು ರಜೆಗಳು ಬಂದಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ. ರಿಪೇರಿಯ ಹಳೆ ಬಾಬ್ತು 5 ಲಕ್ಷ ರೂ.ಬಾಕಿ ಇದೆ ಎಂದು ಹೇಳಿದವರು ಯಾರು? ಒಂದು ವಾರದ ಹಿಂದೆಯಷ್ಟೇ ಮೋಟಾರ್ ಕೆಟ್ಟು ಹೋಗಿದೆ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ ಅಧ್ಯಕ್ಷೆಯ ಪತಿ ಆರ್.ಅಶ್ವತ್ಥನಾರಾಯಣ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: