ಕರ್ನಾಟಕಪ್ರಮುಖ ಸುದ್ದಿ

ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮ ವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಲಾಗುವುದು : ಡಾ. ಜಿ. ಪರಮೇಶ್ವರ್

ರಾಜ್ಯ(ತುಮಕೂರು)ಜ.30:- ಗ್ರಾಮ ವಾಸ್ತವ್ಯ ಪರಿಕಲ್ಪನೆ ಸಮಾಜಮುಖಿಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮ ವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂ. ಬೇವಿನಹಳ್ಳಿಯ ರೈತ ರಂಗಧಾಮಯ್ಯರವರ ಮನೆಯಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದಿಂದ ಹಳ್ಳಿಯ ಸಮಸ್ಯೆ, ಅಲ್ಲಿನ ಜನರ ಕಷ್ಟನಷ್ಟಗಳನ್ನು ತಿಳಿಯಬಹುದಾಗಿದೆ. ಹೀಗಾಗಿ ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮ ವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಿ ಕಡ್ಡಾಯಗೊಳಿಸುವುದಾಗಿ ಹೇಳಿದರು. ಭಾರತೀಯ ಜನತಾ ಪಾರ್ಟಿ ಒಳಗೊಳಗೆ ಓವೈಸಿ ಜತೆ ಸಂಪರ್ಕ ಹೊಂದಿದೆ. ಅದರ ಜತೆ ಮಾತುಕತೆ ನಡೆಸುತ್ತಿರುವ ಬಗ್ಗೆ ನಮಗೆ ಮೊದಲೇ ಮಾಹಿತಿ ಇತ್ತು. ಮುಸ್ಲಿಂರನ್ನು ದ್ವೇಷಿಸುವ ಬಿಜೆಪಿ ಓವೈಸಿ ಜತೆ ಸಖ್ಯ ಬೆಳೆಸಿದೆ. ಅವರಿಗೆ ನೈತಿಕತೆಯೇ ಇಲ್ಲ ಎಂದು ಛೇಡಿಸಿದರು.

ಇದಕ್ಕೂ ಮುನ್ನ ತಮ್ಮ ಗ್ರಾಮಕ್ಕೆ ಆಗಮಿಸಿದ ಅತಿಥಿಯನ್ನು ಗ್ರಾಮದ ಜನತೆ ಕಂಬಳಿ ಹೊದಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ರೈತ ರಂಗಧಾಮಯ್ಯ ಅವರ ಮನೆಗೆ ಬಾಗಿಲಿಗೆ ತೆರಳಿದ ಕೆಪಿಸಿಸಿ ಸಾರಥಿ ಪರಮೇಶ್ವರ್ ಅವರಿಗೆ ಮನೆಯವರು ಆರತಿ ಎತ್ತಿ ಮನೆಯೊಳಗೆ ಕರೆದೊಯ್ದರು. ನಂತರ ರೈತ ರಂಗಧಾಮಯ್ಯ ಅವರ ಮನೆಯಲ್ಲಿ ಮಾಡಿದ್ದ ಮುದ್ದೆ ಊಟ ಸವಿದು ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: