ಕರ್ನಾಟಕ

ಪರಿಸರ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ : ರಾಜೇಂದ್ರ ಬದಾಮಿಕರ್

ರಾಜ್ಯ(ತುಮಕೂರು)ಜ.30:- ಪರಿಸರ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್ ಹೇಳಿದರು.

ನಗರದ ಸಿರಾಗೇಟ್‌ನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ವತಿಯಿಂದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತುಮಕೂರು ನಗರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ರಾಜ್ಯದಲ್ಲೇ ತುಮಕೂರನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು. ನಮ್ಮ ಮನೆ ಕಸವನ್ನು ಪಕ್ಕದ ಮನೆಗೆ ಹಾಕುತ್ತಿದ್ದೇವೆ. ಈ ರೀತಿ ಮಾಡುವುದರಿಂದ ಕಸ ಮತ್ತಷ್ಟು ಉತ್ಪತ್ತಿಯಾಗುತ್ತದೆಯೇ ವಿನಃ ಪರಿಸರದ ನೈರ್ಮಲ್ಯವನ್ನು ಮಾಡಿದಂತಾಗುವುದಿಲ್ಲ. ಬದಲಿಗೆ ಮಹಾನಗರ ಪಾಲಿಕೆಯವರು ನೀಡಿರುವ ಕಸದ ಬುಟ್ಟಿಗಳಿಗೆ ಕಸವನ್ನು ಹಾಕಿ ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ತುಮಕೂರು ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.

ಕೇಂದ್ರ ಸ್ವಚ್ಛ ಸರ್ವೆಕ್ಷಣಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಇನ್ನು ಮೂರು ದಿನಗಳಲ್ಲಿ ಕೇಂದ್ರ ತಂಡದ ಅಧಿಕಾರಿಗಳು ನಗರಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಇಡೀ ನಗರವನ್ನು ಸ್ವಚ್ಛ ಸುಂದರವಾಗಿಟ್ಟುಕೊಳ್ಳಬೇಕಾದ ಜವಾಬ್ದಾರಿ ಕೇವಲ ಮಹಾನಗರ ಪಾಲಿಕೆಯದ್ದಲ್ಲ. ನಗರದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರ ನಾಗರಿಕರ ಜವಾಬ್ದಾರಿಯೂ ಹೌದು ಎಂದರು. ನಗರ ಸ್ವಚ್ಛತೆಯಿಂದ ಪರಿಸರ ಶುಚಿಗೊಳ್ಳುತ್ತದೆ. ಇದರಿಂದ ಉತ್ತಮ ಆರೋಗ್ಯವೂ ಪ್ರಾಪ್ತಿಯಾಗುತ್ತದೆ ಎಂದರು. ಸ್ವಚ್ಛತೆ ಕುರಿತು ದೂರು, ಸಲಹೆ-ಸೂಚನೆಗಳನ್ನು ನೀಡಲು 1969 ಗೆ ಶುಲ್ಕ ರಹಿತ ಕರೆ ಮಾಡಬಹುದು ಎಂದು ಹೇಳಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬ ನಾಗರಿಕರ ಸಹಕಾರವೂ ಅತಿ ಮುಖ್ಯ ಎಂದು ತಿಳಿಸಿದರು.

ಈ ಸಂದರ್ಭ ನ್ಯಾಯಾಧೀಶರಾದ ಜಿನರಾಳ್ಕರ್, ಪಾಲಿಕೆ ಆಯುಕ್ತ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: