ಪ್ರಮುಖ ಸುದ್ದಿಮೈಸೂರು

ಚಿಲ್ಲರೆ ಸಮಸ್ಯೆಯಿಂದ ಪೆಟ್ರೋಲ್ ಬಂಕ್ ಮುಚ್ಚುವ ಸ್ಥಿತಿ: ಶಶಿಕಲಾ ನಾಗರಾಜ್ ಆರೋಪ

ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ನಂತರ ಸಾರ್ವಜನಿಕರು ತ್ವರಿತವಾಗಿ ನಗದು ವಿನಿಮಯ ಮಾಡಿಕೊಳ್ಳಲು ಪೆಟ್ರೋಲ್ ಬಂಕ್‍ಗಳ ಕಡೆ ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್‍ಗಳಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿದೆ. ಅದ್ದರಿಂದ ಗ್ರಾಹಕರು ಚಿಲ್ಲರೆ ನೀಡಿ ಸಹಕರಿಸಬೇಕು ಎಂದು ಫೆಡರೇಷನ್ ಆಫ್ ಮೈಸೂರು ಪೆಟ್ರೋಲಿಯಂ ಡೀಲರ್ಸ್ ಅಧ್ಯಕ್ಷೆ ಶಶಿಕಲಾ ನಾಗರಾಜ್ ಕೋರಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್‍, ಆಸ್ಪತ್ರೆಯಂತಹ ಸಾರ್ವಜನಿಕ ತುರ್ತು ಸೇವೆಯ ಕ್ಷೇತ್ರಗಳಲ್ಲಿ ನ.24ರ ವರೆಗೆ ಹಳೆಯ ನೋಟುಗಳನ್ನು ಸ್ವೀಕರಿಸಬೇಕು ಎಂದು ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ನಿರ್ಧಾರ ಸದುದ್ದೇಶದಿಂದ ಕೂಡಿರಬಹುದು ಆದರೆ ವಾಸ್ತವದಲ್ಲಿ ಈ ಆದೇಶದಿಂದ ಬಂಕ್‍ಗಳು ನೋಟು ನಗದೀಕರಣದ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಚಿಲ್ಲರೆ ಇಲ್ಲದೆ ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು ಬಂಕ್‍ಗಳ ಬಾಗಿಲು ಮುಚ್ಚುವಂತಹ ಪರಿಸ್ಥಿತಿ ಬಂದಿದೆ.

ಪ್ರಧಾನಮಂತ್ರಿ ಮೋದಿಯವರ ಕ್ರಮವನ್ನು ಫೆಡರೇಷನ್ ಸ್ವಾಗತಿಸುತ್ತದೆ. ಆದರೆ, ಕಳೆದ ಹನ್ನೇರಡು ದಿನಗಳಿಂದ ಚಿಲ್ಲರೆ ಅಭಾವ ಉಂಟಾಗಿ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಬ್ಯಾಂಕ್‍ನಿಂದ ಚಿಲ್ಲರೆ ದೊರೆಯುತ್ತಿಲ್ಲ. ಹಳೆ ನೋಟುಗಳ ವಿನಿಮಯ ದೃಷ್ಟಿಯಿಂದ ಗ್ರಾಹಕರೂ ಚಿಲ್ಲರೆ ನೀಡುತ್ತಿಲ್ಲ. ಇದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ತಿಳಿಸಿದರು.

ಚಿಲ್ಲರೆ ಕೇಂದ್ರವಾದ ಪೆಟ್ರೋಲ್ ಬಂಕ್‍ಗಳು

ಗ್ರಾಹಕರು 500 ಹಾಗೂ 100 ರು. ನೋಟುಗಳನ್ನು ನೀಡಿ ಕೇವಲ 50 ಅಥವಾ 200 ರು.ಗಳಿಗೆ ಪೆಟ್ರೋಲ್ ಹಾಕಲು ಒತ್ತಾಯ ಹೇರುತ್ತಿದ್ದಾರೆ. ಈ ಸಂಬಂಧ ಗಲಾಟೆಗಳು ನಡೆಯುತ್ತಿವೆ. ಹಣವೂ ಅತಿ ವೇಗವಾಗಿ ಬಂಕ್‍ಗಳಲ್ಲಿ ಚಲಾವಣೆಯಾಗುತ್ತಿದ್ದು ಆರ್.ಬಿ.ಐ. ಕೇವಲ 24 ಸಾವಿರ ರೂಪಾಯಿ ಚಿಲ್ಲರೆ ನೀಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ನಗಣ್ಯವಾಗಿದೆ. ವಾರಕ್ಕೆ ಎರಡು-ಮೂರು ಲಕ್ಷ ರೂಪಾಯಿ ಚಿಲ್ಲರೆ ಅಗತ್ಯವಿದ್ದು ಕನಿಷ್ಠ ಐವತ್ತು ಸಾವಿರ ರೂಪಾಯಿ ಚಿಲ್ಲರೆ ಲಭಿಸಿದರೂ ಪರಿಸ್ಥಿತಿ ನಿಭಾಯಿಸಬಹುದು. ವ್ಯಾಪಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತದೆ. ಹೀಗಾಗಿ ಪೆಟ್ರೋಲ್ ಬಂಕ್‍ಗಳು ಚಿಲ್ಲರೆ ಕೊಟ್ಟು ಲೆಕ್ಕದ ಖಾತೆ ಸರಿದೂಗಿಸಬೇಕಾದ ಸಂದಿಗ್ಥೆತೆ ಎದುರಿಸಬೇಕಾಗಿದೆ ಎಂದು ವಿವರಿಸಿದರು.

ಪೆಟ್ರೋಲ್ ಬಂಕ್ ಕೆಲಸಗಾರರ ಮೇಲೆ ಹಲ್ಲೆ

ನಿನ್ನೆ ಒಂದೇ ದಿನದಲ್ಲಿ (ನ.20) ದೇಶದಾದ್ಯಂತ ಸುಮಾರು ಇಪ್ಪತ್ತು ಕೋಟಿ ರೂಪಾಯಿ ವಹಿವಾಟು ಪೆಟ್ರೋಲ್ ಬಂಕ್‍ಗಳಲ್ಲಿ ನಡೆದಿದೆ. ಪೆಟ್ರೋಲ್ ಬಂಕ್‍ಗಳಲ್ಲಿ ಹಳೆ ನೋಟುಗಳನ್ನು ಸ್ವೀಕರಿಸಿ ಹೊಸ ನೋಟು ವಿತರಿಸಲಾಗುವುದು ಎನ್ನುವ ಕೇಂದ್ರ ಸರ್ಕಾರದ ಆದೇಶವನ್ನು ಗ್ರಾಹಕರು ಅತಿಯಾಗಿ ಉಪಯೋಗ ಮಾಡುತ್ತಿದ್ದು, ಚಿಲ್ಲರೆ ಮಾಡಿಸಿಕೊಳ್ಳುವುದಕ್ಕೋಸ್ಕರವೇ ಪೆಟ್ರೋಲ್ ಬಂಕ್‍ಗಳಿಗೆ ಬರುವ ಗ್ರಾಹಕರ ಸಂಖ್ಯೆಯೇನೂ ಕಡಿಮೆಯಿಲ್ಲ. ಸದ್ಯದ ಸ್ಥಿತಿಯಲ್ಲಿ ಚಿಲ್ಲರೆ ಇಲ್ಲದೆ ಉದ್ಯಮವನ್ನು ನಡೆಸಲು ಕಷ್ಟವಾಗಿದೆ. ಚಿಲ್ಲರೆ ವಿಷಯವಾಗಿ ಪೆಟ್ರೋಲ್ ಬಂಕ್ ಹುಡುಗರ ಮೇಲೆ ಹಲ್ಲೆಗಳಾಗಿದ್ದು ಅವರ ಕೆಲಸಕ್ಕೆ ಬರಲು ಅಂಜುವಂತಹ ಪರಿಸ್ಥಿತಿ ಇದೆ ಎಂದರು.

ಹೊಸ ನೋಟಿನ ಕೇಂದ್ರಗಳು: ಮೈಸೂರಿನ ಹೆಬ್ಬಾಳದ ಹೆಚ್.ಪಿ.ಪೆಟ್ರೋಲ್ ಬಂಕ್ ಹಾಗೂ ಅನುಗೂಡು ಬಂಕ್‍ನಲ್ಲಿ ಹಣ ಬದಲಾವಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸದ್ಯದಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತ್ ಪೆಟ್ರೋಲಿಯಂ ಅಧ್ಯಕ್ಷ ಗೋವಿಂದ ರಾವ್, ಹಿಂದೂಸ್ತಾನ್ ಪೆಟ್ರೋಲಿಯಂ ಡೀಲರ್ಸ್‍ನ ಅಧ್ಯಕ್ಷ ನಾರಾಯಣ ಸ್ವಾಮಿ, ಅಖಿಲ ಕರ್ನಾಟಕ ಪೆಟ್ರೋಲಿಯಂ ಅಸೋಸಿಯೇಷನ್ ಕಾರ್ಯದರ್ಶಿ ರಂಜಿತ್ ಹೆಗಡೆ, ಬಸವೇಗೌಡ ಹಾಗೂ ರವಿಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: