ಮೈಸೂರು

ಕುವೆಂಪು ಕಾವ್ಯಾಸ್ವಾದ ಕೃತಿ ಲೋಕಾರ್ಪಣೆ; ಕಾವ್ಯವನ್ನು ಮೀರಿದ ಲೇಖನಗಳು ಕೃತಿಯಲ್ಲಿವೆ: ಅರವಿಂದ ಮಾಲಗತ್ತಿ

ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕಾವ್ಯಾಧ್ಯಯನ ಪೀಠ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಪ್ರೊ.ಡಿ.ಕೆ. ರಾಜೇಂದ್ರ ಅವರ ‘ಕುವೆಂಪು ಕಾವ್ಯಾಸ್ವಾದ’ ಕೃತಿ ಲೋಕಾರ್ಪಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಅಧ‍್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಅರವಿಂದ ಮಾಲಗತ್ತಿ ಅವರು ಕೃತಿ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು,  ಡಿ.ಕೆ. ರಾಜೇಂದ್ರ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಹಿಂದೆ ಸರಿದಿದ್ದ ವಿಶ್ವಕೋಶ ಸಂಪುಟಕ್ಕೆ ಜೀವ ತುಂಬಿ 13 ನೇ ಸಂಪುಟವನ್ನು ಹೊರತಂದರು. ಅವರ ನಿರ್ದೇಶಕತ್ವ ಪೀಠಿಕೆ ರೂಪದಲ್ಲಿದ್ದು, ನನಗೆ ಇಷ್ಟವಾಗುತ್ತಿತ್ತು. ಅವರು ನನಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಕೃತಿ ಬಿಡುಗಡೆ ಮಾಡುವ ಮೂಲಕ ಅವರಿಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ. ರಾಜೇಂದ್ರ ಅವರು ಜಾನಪದ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಒಳನೋಟ ಎಂಬ ವಿಮರ್ಶಾ ಕೃತಿಯಲ್ಲಿ ಅವರ ಆಲೋಚನಾ ಕ್ರಮ ಮತ್ತು ವಿಮರ್ಶೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿ, ರಾಜೇಂದ್ರ ಅವರ ಕೃತಿಯ ಶೀರ್ಷಿಕೆ ಮಿತಿಯನ್ನು ದಾಟುತ್ತದೆ. ಕೃತಿ ಹೆಚ್ಚು ವಿಸ್ತಾರವಾಗಿದೆ. ಕಾವ್ಯವನ್ನು ಮೀರಿದ ಲೇಖನಗಳು ಈ ಕೃತಿಯಲ್ಲಿವೆ. ಕೇವಲ ಕಾವ್ಯವನ್ನು ಉದ್ದೇಶಿಸಿ ಈ ಕೃತಿ ಹೊರಬಂದಿಲ್ಲ. ನಿಸರ್ಗ ಪ್ರೇಮ, ಗ್ರಂಥಾಲಯ, ಆಡಳಿತ ಇನ್ನೂ ಮೊದಲಾದ ವಿಷಯಗಳನ್ನು ಒಳಗೊಂಡಿದೆ ಎಂದರು.

ಕುವೆಂಪು ಅವರ ಎಲ್ಲಾ ಸಾಹಿತ್ಯ ಪ್ರಾಕಾರಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಅವರ ಕಾವ್ಯಗಳನ್ನು ಮಾತ್ರವಲ್ಲದೇ ಬಹುಪಾಲು ಕೃತಿಗಳನ್ನು ಗಮನದಲ್ಲಿಟ್ಟುಕೊಂಡು, ಕುವೆಂಪು ಅವರ ವಿಚಾರಧಾರೆಗಳನ್ನು ಸ್ಪಷ್ಟವಾಗಿ ತಿಳಿಸುವ ಮತ್ತು ಅವರ ಕೃತಿಗಳನ್ನು ಮರುವಿಮರ್ಶೆಗೆ ಒಳಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಯಲ್ಲಿ ಒಟ್ಟು 8 ಲೇಖನಗಳಿದ್ದು, 4 ಲೇಖನಗಳು ಕಾವ್ಯಕ್ಕೆ ಸಂಬಂಧಿಸಿದ್ದು. ಇನ್ನುಳಿದ 4 ಲೇಖನಗಳು ಕಾವ್ಯ ಕ್ಷೇತ್ರದಿಂದ ಹೊರತಾದವುಗಳಾಗಿವೆ. ಒಟ್ಟಾರೆ ಕುವೆಂಪು ಅವರ ಕಾವ್ಯಾಸ್ವಾದ ಬಹುಮುಖ ಅಧ್ಯಯನದ ಕೃತಿಯಾಗಿದೆ ಎಂದು ಹೇಳಿದರು.

ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ‍್ಯಾಪಕ ಮತ್ತು ಲೇಖಕ ಹಾಗೂ ಕೃತಿಯ ಕರ್ತೃ ಪ್ರೊ. ಡಿ.ಕೆ ರಾಜೇಂದ್ರ ಮಾತನಾಡಿ, ಭಾಷಾಂತರ ಮತ್ತು ವಿಮರ್ಶೆ ನಿರಂತರ ಪ್ರಕ್ರಿಯೆಗಳು. ಇವೆರಡೂ ಸಹ ಸಾಹಿತ್ಯದ ಅವಿಭಾಜ್ಯ ಅಂಗಗಳು. ಪ್ರತಿ 50 ವರ್ಷಗಳಿಗೊಮ್ಮೆ ಭಾಷಾಂತರ ಪ್ರಕ್ರಿಯೆ ನಡೆಯುತ್ತಿರಬೇಕು. ಜೀವಂತ ಸಾಹಿತ್ಯದ ಪ್ರಮುಖ ಲಕ್ಷಣ ಅಂದರೆ ಮತ್ತೆ ಮತ್ತೆ ಓದಿಸಿಕೊಂಡು ಹೋಗುವುದು. ಕುವೆಂಪು ಅವರ ಸಾಹಿತ್ಯ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ. ಪ್ರಸ್ತುತತೆಯನ್ನು ಕಳೆದುಕೊಂಡ ಸಾಹಿತ್ಯ ಹೆಚ್ಚು ಕಾಲ ಉಳಿಯಲಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ವಿಶ್ರಾಂತಕುಲಪತಿ ಪ್ರೊ. ಬಸವರಾಜ ಕಲ್ಗುಡಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಪ್ರೀತಿ ಶ್ರೀಮಂಧರ್ ಕುಮಾರ್, ಸಹಾಯಕ ಪ್ರಾಧ್ಯಾಪಕಿ ಡಾ. ಎನ್.ಕೆ. ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: