ಪ್ರಮುಖ ಸುದ್ದಿಮೈಸೂರು

ರುಡ್‍ಸೆಟ್ ಬೆಳ್ಳಿ ಹಬ್ಬದ ಸಂಭ್ರಮ: ನ. 25ರಂದು ರಕ್ತದಾನ ಶಿಬಿರ ಹಾಗೂ ಜಾಥಾ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ “ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಕೇಂದ್ರ” – ರುಡ್‍ಸೆಟ್ ಇನ್‍ಸ್ಟಿಟ್ಯೂಟ್‍ ಮೈಸೂರು ಶಾಖೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಜಾಥಾ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿರಿಯ ಉಪನ್ಯಾಸಕ ರವೀಂದ್ರ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳ್ಳಿ ಹಬ್ಬವು ಜನವರಿಯಲ್ಲಿ ನಡೆಯಲಿದ್ದು ಅದರ ಶುಭಾರಂಭವು ಡಾ.ವಿರೇಂದ್ರ ಹೆಗ್ಗಡೆಯವರ ಜನ್ಮದಿನವಾದ ನ.25 ರಂದು ಆರಂಭಗೊಳ್ಳಲಿದೆ. ರಕ್ತದಾನ ಶಿಬಿರವನ್ನು ನಗರದ ಜೆ.ಎಸ್.ಎಸ್. ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಸಂಸ್ಥೆಯ ಫಲಾನುಭವಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭ ಆಯೋಜಿಸಿರುವ ಜಾಥಾಗೆ ಬೆಳಗ್ಗೆ 8 ಗಂಟೆಗೆ ಮೈಸೂರು ಅರಮನೆಯಲ್ಲಿ ಚಾಲನೆ ನೀಡಲಿದ್ದು ಜಾಥಾವು ರೈಲ್ವೆ ನಿಲ್ದಾಣ, ವಿನೋಬಾ ರಸ್ತೆ, ಜಿಲ್ಲಾಧಿಕಾರಿ ಕಛೇರಿ ಹಿಂಭಾಗದಿಂದ ಸಾಗಿ ಕ್ರಾಫರ್ಡ್ ಹಾಲ್‍ನ ಮುಂದಿನ ಆಟದ ಮೈದಾನದಲ್ಲಿ ಕೊನೆಗೊಳ್ಳುವುದು ಎಂದು ತಿಳಿಸಿದರು.

1992ರಿಂದಲೂ ಮೈಸೂರಿನಲ್ಲಿ ಸಂಸ್ಥೆಯು ಸಿಂಡಿಕೇಟ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಾ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುತ್ತಿದೆ. ನಿರುದ್ಯೋಗಿಗಳಿಗೆ ವಸತಿ ಸಮೇತವಾಗಿ ಒಂದು ವಾರದಿಂದ ಆರು ವಾರಗಳ ಕಾಲವಧಿವರೆಗೂ ಕಂಪ್ಯೂಟರ್, ಕೃಷಿ, ತೋಟಗಾರಿಕೆ, ಬ್ಯೂಟಿ ಪಾರ್ಲರ್, ಮೊಬೈಲ್ ರಿಪೇರಿ ಸೇರಿದಂತೆ ಹಲವು ತರಬೇತಿಗಳನ್ನು ಸಂಸ್ಥೆಯು ನೀಡುತ್ತಿದೆ. ದೇಶದ ಸುಮಾರು ಹದಿನೇಳು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ ಮೂವತ್ತೆರಡು ಕೇಂದ್ರಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಈಗಾಗಲೇ ಇಪ್ಪತ್ಮೂರು ಸಾವಿರದ ಏಳುನೂರ ಇಪ್ಪತ್ತೊಂದು ಜನರಿಗೆ ತರಬೇತಿ ನೀಡಲಾಗಿದೆ. ಶೇ.72ರಷ್ಟು ಮಂದಿ ಸ್ವಯಂ ಉದ್ಯೋಗ ನಿರತರಾಗಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಜಿ. ಸೇಲ್ವಂ, ಪಾಲ್‍ರಾಜ್ ಉಪಸ್ಥಿತರಿದ್ದರು.

Leave a Reply

comments

Related Articles

error: