
ಮೈಸೂರು
ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ : ಜಯಣ್ಣ
ಈ ಬಾರಿ ಮಳೆ ಕೈಕೊಟ್ಟಿದ್ದು ಹಲವೆಡೆ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಶಾಸಕ ಎಸ್.ಜಯಣ್ಣ ತಿಳಿಸಿದರು.
ಯಳಂದೂರು ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಜಯಣ್ಣ ಮಾತನಾಡಿದರು. ಬಿಳಿಗಿರಿ ರಂಗನ ಬೆಟ್ಟ ಪ್ರವಾಸಿ ತಾಣವಾಗಿದೆ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ನೂರಾರು ಕುಟುಂಬಗಳು ಇಲ್ಲಿ ವಾಸವಾಗಿವೆ. ಗ್ರಾಮಾಂತರ ಕುಡಿಯುವ ನೀರಿನ ಯೋಜನೆಯಡಿ 25ಲಕ್ಷರೂ. ವೆಚ್ಚದಲ್ಲಿ ಸುಸಜ್ಜಿತ ಟ್ಯಾಂಕ್ ನಿರ್ಮಿಸಲಾಗುವುದು. ಜೊತೆಗೆ ಪ್ರವಾಸಿ ಕ್ಷೇತ್ರದ ಮೂಲ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾಪಂಚಾಯತ್ ಸದಸ್ಯ ಜೆ.ಯೋಗೇಶ್, ತಾ.ಪಂ ಅಧ್ಯಕ್ಷ ನಂಜುಂಡಪ್ಪಯ್ಯ, ಪಂಚಾಯತ್ ರಾಜ್ ಇಲಾಖೆಯ ಎಇಇ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.