ಕರ್ನಾಟಕಮೈಸೂರು

ಮಲೆಯೂರು ಪಂಚಮುಖಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ

“ಚಾಮರಾಜನಗರ ತಾಲ್ಲೂಕು ಮಲೆಯೂರು ಶ್ರೀಕನಕಗಿರಿ ಪಂಚಮುಖಿಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಬಿಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ಖಂಡನೀಯ” ಎಂದು ಶ್ರೀಕನಕಗಿರಿ ಪಂಚಮುಖಿ ಬೆಟ್ಟದ ಸಂರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಸಮಿತಿಯು ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, 2000 ನೇ ಇಸವಿಯಲ್ಲಿಯೇ ರಾಜ್ಯಪಾಲರು ಮಲೆಯೂರು ಬೆಟ್ಟದ ಸುತ್ತಮುತ್ತಲಿನ ಎರಡು ಕಿಲೊಮೀಟರ್‍ವರೆಗೂ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಕಡೆಗಣಿಸಿರುವ ಪ್ರಭಾವಿಗಳು ಎಗ್ಗಿಲ್ಲದೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಬೆಟ್ಟದ ಸಂರಕ್ಷಣೆಗೆ ಪುರಾತತ್ವ ಇಲಾಖೆಯು ಸದರಿ ಪ್ರದೇಶದ ನಕ್ಷೆಯನ್ನು ತಯಾರಿಸಿ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಕಳುಹಿಸಿದ್ದರೂ ಸರ್ಕಾರ ಸಂರಕ್ಷಿತ ಪ್ರದೇಶವೆಂದು ಘೋಷಿಸಿಲ್ಲ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಪಟ್ಟಭದ್ರರು ನಿರ್ಭಯವಾಗಿ ಗಣಿಗಾರಿಕೆ ನಡೆಸುತ್ತಿದ್ದು ದಿನಂಪ್ರತಿ ಹತ್ತರಿಂದ ಹದಿನೈದು ಲೋಡ್‍ಗಳವರೆಗೂ ಕಲ್ಲುಗಳನ್ನು ಸಾಗಿಸುತ್ತಿದ್ದಾರೆ. ಇದನ್ನು ಪ್ರಶ್ನಿಸುವವರೆ ಇಲ್ಲ. ತಕ್ಷಣವೇ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕೆಂದು ಸಮಿತಿಯ ಚಿಕ್ಕನಾಗಪ್ಪ ಹಾಗೂ ಎಂ.ಬಿ.ಮಹದೇವಪ್ಪ ಆಗ್ರಹಿಸಿದ್ದಾರೆ.

ಬೆಟ್ಟದ ದಕ್ಷಿಣ ತುದಿಯಲ್ಲಿ ಶ್ರೀವಿಜಯಪಾರ್ಶ್ವನಾಥ ದೇವಸ್ಥಾನ ಹಾಗೂ ಬ್ರಹ್ಮಲಿಂಗೇಶ್ವರ ಸ್ಥಿಲಸ್ತಂಭ, 24 ಜೈನ ತೀರ್ಥಂಕರರ ಪಾದುಕೆಗಳು ಸೇರಿದಂತೆ ಅಮೂಲ್ಯ ಗಿಡಮೂಲಿಕೆಗಳು ಅಡಗಿವೆ. ಇಂತಹ ಪರಿಸರವನ್ನು ಸಂರಕ್ಷಿಸಲು ಗ್ರಾಮಸ್ಥರಿಂದ ಹಲವಾರು ಹೋರಾಟಗಳು ನಡೆದಿದ್ದರೂ ಗಣಿಗಾರಿಕೆ ಸ್ಥಗಿತವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿರು.

ಕೇವಲ ಕೂಲಿಕಾರರ ಜೀವನಕ್ಕೆ ತೊಂದರೆಯಾಗುವ ನೆಪವೊಡ್ಡಿ ಗಣಿಗಾರಿಕೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ನೆಪಮಾತ್ರದ ಪಲಾಯನವಾದಿ ತಂತ್ರವಾಗಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಗ್ರೇ-ಗ್ರಾನೈಟ್ ಶಿಲಾದಿಮ್ಮಿಗಳನ್ನು ಸಾಗಿಸುತ್ತಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟಗಳು ನಡೆಯುತ್ತಿದ್ದು ಪಟ್ಟಭದ್ರರ ವಿರುದ್ಧ ಹೋರಾಡುವಷ್ಟು ಹಣ-ಅಧಿಕಾರದ ಬಲ ನಮ್ಮಲ್ಲಿಲ್ಲ. ಸರ್ಕಾರ ಮಧ್ಯ ಪ್ರವೇಶಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಎಂ.ಎನ್. ರೇವಣ್ಣ, ನಂಜಪ್ಪ, ಎಂ.ಎಲ್. ಈರಪ್ಪ, ಹಾಗೂ ಬಸವರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: