ಪ್ರಮುಖ ಸುದ್ದಿಮೈಸೂರು

ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಆದಾಯ ತರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯಯದಲ್ಲಿ ವಸತಿ ಸೌಕರ್ಯವಿಲ್ಲ..!

ದೂರದೂರುಗಳಿಂದ ಆಗಮಿಸಿ ರಸ್ತೆಯಲ್ಲಿ ಮಲಗುತ್ತಿರುವ ಭಕ್ತರು

ಮೈಸೂರು,ಜ.31:-  ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಆದಾಯ ತರುವ ರಾಜ್ಯದ ‘ಎ’ ಶ್ರೇಣಿಯ ದೇಗುಲಗಳಲ್ಲಿ ನಂಜನಗೂಡಿನ  ಶ್ರೀಕಂಠೇಶ್ವರಸ್ವಾಮಿ ದೇವಾಲಯವೂ ಒಂದು. ಆದರೆ ಇಲ್ಲಿ ದೂರದ ಊರುಗಳಿಂದ ಬರುವ ಭಕ್ತರು ಸಮರ್ಪಕ ವಸತಿ ಸೌಕರ್ಯವಿಲ್ಲದೆ ಬೀದಿಯಲ್ಲಿಯೇ ಮಲಗುವಂತಾಗಿದೆ.

ಹುಣ್ಣಿಮೆ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆಯಲು ವಿವಿಧೆಡೆಯಿಂದ ಬಂದ ಭಕ್ತಾದಿಗಳಿಗೆ ಮತ್ತು ಸಣ್ಣ-ಪುಟ್ಟ ಮಕ್ಕಳಿಗೆ ಮಲಗಲು ಸೂಕ್ತ ವಸತಿ ಸೌಲಭ್ಯವಿಲ್ಲದೆ ದೇವಾಲಯದ ಕೈಸಾಲೆ, ಮಳಿಗೆಗಳ ಮುಂದೆ ಮತ್ತು ದೇವಸ್ಥಾನದ ಮುಂಭಾಗದಲ್ಲೇ ನೆಲದ ಮೇಲೆ ತುಂತುರು ಮಳೆ, ಚಳಿಯಲ್ಲಿಯೇ ರಾತ್ರಿ ಕಳೆಯುವಂತಾಯಿತು. ಗಿರಿಜಾ ಕಲ್ಯಾಣ ಮಂಟಪದಲ್ಲಿ ಭಕ್ತರ ಸೇವಾರ್ಥದ ಹಣದಲ್ಲಿ ನಿರ್ಮಿಸಿರುವ 24 ಕೊಠಡಿ ಹಾಗೂ 180 ಮಂದಿ ತಂಗುವಂತಹ ದೇಗುಲದ ಡಾರ್ಮೆಟರಿ ಬಿಟ್ಟರೆ ಇಲ್ಲಿ ಬೇರೆ ವಸತಿಗೃಹಗಳಿಲ್ಲ. ಹೆಚ್ಚಿನ ವಸತಿ ಗೃಹಗಳ ನಿರ್ಮಾಣಕ್ಕೆ ದೇವಾಲಯದ ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಮುಂದಾಗಿದ್ದರೂ ಇನ್ನೂ ಕೆಲಸ ಪ್ರಾರಂಭಿಸದೇ ಕಾಲಕಳೆಯುತ್ತಿದ್ದಾರೆ ಎಂದು ಭಕ್ತಾದಿಗಳು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.

ಶ್ರೀಕಂಠೇಶ್ವರಸ್ವಾಮಿ ದರ್ಶನ ಬಯಸಿ ಭೇಟಿ ನೀಡುವ ಭಕ್ತರ ಸಂಖ್ಯೆ ಪ್ರತಿವರ್ಷವೂ ಗಣನೀಯವಾಗಿ ಹೆಚ್ಚುತ್ತಿದೆ. ತಿಂಗಳ ಪ್ರತಿ ಭಾನುವಾರ, ಸೋಮವಾರ, ಹಬ್ಬ, ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಆದರೆ, ರಾತ್ರಿ ತಂಗಲು ವ್ಯವಸ್ಥೆಯಿಲ್ಲದೆ ಹೆಚ್ಚಿನ ಹಣ ತೆತ್ತು ಖಾಸಗಿ ವಸತಿ ಗೃಹಗಳಲ್ಲಿ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷದಿಂದ ದೇವಾಲಯದ ಹುಂಡಿಗಳಲ್ಲಿ ಮಾಸಿಕ 1 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗುತ್ತಿದೆ. ಅಲ್ಲದೆ, ಭಕ್ತರು ಸಲ್ಲಿಸುವ ವಿವಿಧ ಸೇವೆ, ವಿಶೇಷ ದರ್ಶನದ ಟಿಕೇಟ್, ವಾಹನ ನಿಲುಗಡೆ ಶುಲ್ಕ, ಚಪ್ಪಲಿ ಕಾಯುವ ಶುಲ್ಕ ಸೇರಿ ವಾರ್ಷಿಕ 20 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ವಿವಿಧ ಬ್ಯಾಂಕುಗಳಲ್ಲಿ ಹೆಚ್ಚು ಹಣ ಠೇವಣಿ ಇರಿಸಲಾಗಿದೆ. ಆದರೆ, ಅಭಿವೃದ್ಧಿಗೆ ಬಳಸಲು ಮುಜರಾಯಿ ಇಲಾಖೆ ಮತ್ತು ದೇವಾಲಯಕ್ಕೆ ಬಂದಂತಹ ಇ.ಓ.ಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಎಂ.ಮಹದೇವ್ ಅವರು ಎಸ್.ಎಂ.ಕೃಷ್ಣ ಸಂಪುಟದಲ್ಲಿದ್ದಾಗ 2006 ರಲ್ಲಿ ದೇವಾಲಯ ಸಮಗ್ರ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ಆನಂತರ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯ ಪಟ್ಟಿಯಲ್ಲಿದ್ದ ಬೃಹತ್ ವಸತಿಗೃಹ ನಿರ್ಮಾಣ ಯೋಜನೆ ಜಾರಿಗೆ ಬರಲೇ ಇಲ್ಲ. ಇದರಿಂದ ಭಕ್ತರು ಬೀದಿಯಲ್ಲಿ ಮಲಗುವಂತಾಗಿದೆ.

ಶ್ರೀಕಂಠೇಶ್ವರಸ್ವಾಮಿ ನಮ್ಮ ಮನೆ ದೇವರು. ಹುಣ್ಣಿಮೆ ಸೇವೆಗಾಗಿ ಮನೆಯವರೊಂದಿಗೆ ಬಂದಿದ್ದೇನೆ. ಆದರೆ, ತಂಗಲು ದೇವಾಲಯದಿಂದ ಸೂಕ್ತ ವಸತಿ ಸೌಲಭ್ಯವಿಲ್ಲ. ಖಾಸಗಿಯವರು ಇದನ್ನೇ ಬಂಡವಾಳ ಮಾಡಿಕೊಂಡು ಒಂದು ರೂಂಗೆ 700-1000 ಕೇಳುತ್ತಾರೆ. ನಮಗೆ ಅಷ್ಟೊಂದು ಹಣ ನೀಡಲು ಆಗುವುದಿಲ್ಲ. ಆದ್ದರಿಂದ ನಾವು ಮಕ್ಕಳನ್ನು ರಸ್ತೆ ಬದಿಯಲ್ಲಿ ಮಲಗಿಸಿ ಕಾವಲು ಕಾಯುತ್ತಿದ್ದೇನೆ. ಕೋಟ್ಯಾಂತರ ರೂಪಾಯಿ ಆದಾಯವಿರುವ ದೇವಾಲಯದ ಆಡಳಿತ ಮಂಡಳಿ ವಸತಿ ಸಂಕೀರ್ಣ ನಿರ್ಮಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ತುಮಕೂರಿನಿಂದ ಬಂದಿದ್ದ ಸೋಮೇಶ್ವರಪ್ಪ ನೋವಿನಿಂದ ನುಡಿದರು.

ಮೊದಲ ಹಂತದ ಅಭಿವೃದ್ಧಿ ಯೋಜನೆಯಡಿ ತಿರುಪತಿ ಮಾದರಿಯ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ, ಇದು ಉಪಯೋಗಕ್ಕೆ ಬಾರದಿರುವುದರಿಂದ 4 ವರ್ಷದ ಹಿಂದೆ 14 ಮಳಿಗೆಗಳನ್ನು ವಸತಿ ಗೃಹಗಳಾಗಿ ಪರಿವರ್ತಿಸಲಾಗಿದೆ. ಆದರೆ, ಭಕ್ತರಿಗೆ ನೀಡುತ್ತಿಲ್ಲ. ವಸತಿ ಗೃಹಗಳಿಗಾಗಿ ಪರಿವರ್ತಿಸಲಾಗಿರುವ ವಸತಿ ಗೃಹಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಲಕ್ಷಾಂತರ ರೂಗಳಿಂದ ಮಾಡಿದ್ದಾರೆ. ಆದರೆ ಭಕ್ತರಿಗೆ ನೀಡದೇ ಇದ್ದುದ್ದರಿಂದ ಇದು ಕುಡುಕರ ತಾಣವಾಗಿದೆ. ಲಕ್ಷಾಂತರ ರೂ.ಹಣದಿಂದ ಮಾಡಿದ ಶೌಚಾಲಯಗಳು ಸ್ವಚ್ಛತೆ ಇಲ್ಲದೇ ಹಾಳಾಗಿದೆ. ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಶ್ರೀಕಂಠೇಶ್ವರ ಕಲಾಭವನದಲ್ಲಿ ಮಲಗಲು ಬರುವ ಭಕ್ತರಿಗೆ ಅವಕಾಶ ಕಲ್ಪಿಸಿದರೆ ತಾತ್ಕಾಲಿಕವಾಗಿಯಾದರೂ ಪರಿಹಾರ ಸಿಗುತ್ತದೆ.  ಆದರೂ ಇತ್ತೀಚಿನ ದಿನಗಳಲ್ಲಿ ಬರುವ ಭಕ್ತರಿಗೆ ದೇವಾಲಯದ ವತಿಯಿಂದ ಕಲಾಭವನದಲ್ಲಿ ಮಲಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೂ ಕಲಾಭವನದ ಬಾಗಿಲನ್ನು ಸುಮಾರು 10.30 ರ ನಂತರ ತೆಗೆಯಲಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಂಜೆ 5 ಗಂಟೆಗೆ ಬಾಗಿಲನ್ನು ತೆರೆದರೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ  ಮಂಡ್ಯದ ಶಿವಮ್ಮ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ದೂರದ ಊರುಗಳಿಂದ ಬರುವ ಭಕ್ತಾದಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡುವಂತಾಗಬೇಕು ಎಂಬುದು ಭಕ್ತರ ಒತ್ತಾಸೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: