
ಮೈಸೂರು
ನಗರದ ವಿವಿಧೆಡೆ ಮನಪಾ ಅಧಿಕಾರಿಗಳ ದಾಳಿ : ಅಪಾರ ಪ್ರಮಾಣದ ಪ್ಲಾಸ್ಟಿಕ್ ವಶ
ಮೈಸೂರು ಮಹಾನಗರಪಾಲಿಕೆ ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಮೈಸೂರಿನ ವಿವಿಧೆಡೆ ವಿವಿಧ ಮಳಿಗೆಗಳ ಮೇಲೆ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳ ತಂಡ ಮೂರು ಟನ್ ನಷ್ಟು ಪ್ರಮಾಣದ ಪ್ಲಾಸ್ಟಿಕ್ ಕವರ್ ಬ್ಯಾಗ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೈಸೂರಿನ ಅಗ್ರಹಾರದ ಬಳಿ ಇರುವ ಸೆಂದಿಲ್ ಕುಮಾರ್ ಟೆಕ್ಸ್ ಟೈಲ್ಸ್ ಮಳಿಗೆಯ ಮೇಲೆ ದಾಳಿ ನಡೆಸಿದ ತಂಡ ಅತ್ಯಧಿಕ ಪ್ರಮಾಣದ ಪ್ಲಾಸ್ಟಿಕ್ ಕವರ್ ಬ್ಯಾಗ್ ಗಳನ್ನು ವಶಪಡಿಸಿಕೊಂಡಿದೆ. ಅಗ್ರಹಾರದ ವಿವಿ ಮಾರುಕಟ್ಟೆಯ ಮಳಿಗೆಯೊಂದರ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಅಲ್ಲಿ ಸುಮಾರು ಮೂರು ಕೆ.ಜಿಯಷ್ಟು ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪಾಲಿಕೆಯ ಆಯುಕ್ತ ಜೆ.ಜಗದೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ದೇವರಾಜ ಮಾರುಕಟ್ಟೆಯ ಬಳಿಯ ಮಳಿಗೆಯೊಂದರ ಮೇಲೂ ಪಾಲಿಕೆಯ ಆರೋಗ್ಯಾಧಿಕಾರಿ ನಾಗರಾಜ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಪ್ಲಾಸ್ಟಿಕ್ ಕವರ್ ಬ್ಯಾಗ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಎಲ್ಲ ಮಳಿಗೆಗಳ ಮಾಲೀಕರಿಗೂ ನೋಟೀಸ್ ನೀಡುವುದರ ಜೊತೆ ಎಚ್ಚರಿಕೆಯನ್ನೂ ಕೊಡಲಾಗಿದೆ.