ದೇಶಪ್ರಮುಖ ಸುದ್ದಿ

ಐಎನ್‍ಎಸ್ ಚೆನ್ನೈ ಸಮರನೌಕೆ ಸೇನೆಗೆ ಸೇರ್ಪಡೆ

ಐನ್‍ಎನ್‍ಎಸ್‍ ಕೋಲ್ಕತಾ ಸರಣಿಯ 3ನೇ ಯುದ್ಧ ನೌಕೆ ಐಎನ್‍ಎಸ್‍ ಚೆನ್ನೈ ದೇಶದ ಸೇನೆಗೆ ಸೇರ್ಪಡೆಯಾಗಿದೆ. ಜಲಯುದ್ಧಗಳನ್ನು ಸಮರ್ಥವಾಗಿ ನಿರ್ವಹಿಸುವ ಈ ಸಮರ ನೌಕೆಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಸಮ್ಮುಖದಲ್ಲಿ ಸೋಮವಾರ ದೇಶಕ್ಕೆ ಸಮರ್ಪಿಸಲಾಯಿತು.

ಇದು ಅತ್ಯಾಧುನಿಕ ತಂತ್ರಜ್ಞಾನದ ಐಎನ್‍ಎಸ್‍ ಕೋಲ್ಕತಾ ಸರಣಿಯಲ್ಲಿ ತಯಾರಾದ ತಯಾರಾಗಿರುವ 3ನೇ ಸಮರನೌಕೆಯಾಗಿದ್ದು, ಮೊದಲ ನೌಕೆ ಐಎನ್‍ಎಸ್‍ ಕೋಲ್ಕತ, ಎರಡನೆಯದಾಗಿ ಐಎನ್‍ಎಸ್‍ ಕೊಚಿ ನೌಕೆಗಳು ಈಗಾಗಲೆ ಸೇನೆಯ ಸೇವೆಯಲ್ಲಿವೆ. ಮೊದಲೆರಡು ನೌಕೆಗಳಿಗಿಂತ ಗಾತ್ರ ಮತ್ತು ಸಾಮರ್ಥ್ಯದಲ್ಲೂ ಈ ನೌಕೆ ದೊಡ್ಡದಿದೆ. ಇಂಡಿಯನ್ ನೇವಲ್ ಶಿಪ್‍ಯಾರ್ಡ್‍ನಲ್ಲಿ ತಯಾರಾದ ಈ ನೌಕೆ 164 ಮೀಟರ್ ಉದ್ದ 7500 ಟನ್ ತೂಕ ಹೊಂದಿದೆ.

ದೇಶಿಯವಾಗಿ ತಯಾರಿಸಿರುವ ಈ ನೌಕೆಯ ಸೇರ್ಪಡೆಗಾಗಿ ನೌಕಾಸೇನೆ ಬಹಳ ಸಮಯದಿಂದ ನಿರೀಕ್ಷೆಯಿಂದಿತ್ತು. ನೌಕೆಯಲ್ಲಿ ಭೂಮಿಯಿಂದ ಚಿಮ್ಮಿ ಭೂಮಿಯ ಗುರಿಗಳಿಗೆ ಅಪ್ಪಳಿಸುವ ಸೂಪರ್ ಸಾನಿಕ್  ಬ್ರಹ್ಮೋಸ್ ಕ್ಷಿಪಣಿಗಳು, ಭೂಮಿಯಿಂದ ಚಿಮ್ಮಿ ಆಕಾಶದಲ್ಲಿನ ಶತ್ರು ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಬರಾಕ್ – 8 ಕ್ಷಿಪಣಿಗಳನ್ನು ಅಳವಡಿಸಲಾಗಿದೆ. ಜೈವಿಕ, ರಾಸಾಯನಿಕ ಅಸ್ತ್ರಗಳ ದಾಳಿ ಸಂದರ್ಭದಲ್ಲೂ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಬಲ್ಲ ಸಾಮರ್ಥ್ಯ ಈ ನೌಕೆಗಿದೆ.

Leave a Reply

comments

Related Articles

error: