ಕರ್ನಾಟಕ

ಮೇಲು ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಆರಂಭಿಸಿ : ಪಕ್ಷಾತೀತ ಆಗ್ರಹ

ರಾಜ್ಯ(ಮಡಿಕೇರಿ) ಫೆ.1 : – ಮಳೆಗಾಲದಲ್ಲಿ ದ್ವೀಪದಂತಾಗುವ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲುಸೇತುವೆ ನಿರ್ಮಾಣ ಕಾರ್ಯವನ್ನು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ಆರಂಭಿಸಬೇಕೆಂದು ವಿವಿಧ ಪಕ್ಷಗಳ ಸ್ಥಳೀಯ ಮುಖಂಡರುಗಳು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸ್ಸೂರು ಸತೀಶ್ ಜೋಯಪ್ಪ ರಾಜ್ಯ ಸರ್ಕಾರ ಭಾಗಮಂಡಲಕ್ಕೆ ಬಹುದೊಡ್ಡ ಕೊಡಗೆಯಾಗಿ ಮೇಲುಸೇತುವೆಯ ಯೋಜನೆಯನ್ನು ನೀಡಿದ್ದು, ಇದನ್ನು ಪಕ್ಷಾತೀತವಾಗಿ ಸ್ಥಳೀಯ ಎಲ್ಲಾ ಮುಖಂಡರುಗಳು ಮತ್ತು ಗ್ರಾಮಸ್ಥರು ಸ್ವಾಗತಿಸುವುದಾಗಿ ತಿಳಿಸಿದರು.

ಸುಮಾರು 29.67 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಾಥಮಿಕ ಹಂತದ ಪ್ರಕ್ರಿಯೆ ಆರಂಭಗೊಳ್ಳುವ ಸಂದರ್ಭದಲ್ಲೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದರು.

ಪ್ರತಿ ಮಳೆಗಾಲದಲ್ಲಿ ರಸ್ತೆ ಸಂಪರ್ಕವನ್ನು ಕಡಿದುಕೊಂಡು ಸ್ಥಳೀಯರು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸುತ್ತಾರೆ. ಮಳೆಗಾಲದ ಸಂಕಷ್ಟ ಸ್ಥಳಿಯರಿಗಷ್ಟೆ ತಿಳಿದಿದ್ದು, ಮೇಲುಸೇತುವೆಯ ಯೋಜನೆಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದರು.

ಮೇಲುಸೇತುವೆ ನಿರ್ಮಾಣದಿಂದ ಭಾಗಮಂಡಲ ಹಾಗೂ ತಲಕಾವೇರಿಯ ಪಾವಿತ್ರ್ಯತೆಗೆ ಯಾವುದೇ ದಕ್ಕೆ ಬರುವುದಿಲ್ಲ, ಅಲ್ಲದೆ ಈ ಹಿಂದೆ ಜಿಲ್ಲಾಡಳಿತ ನಡೆಸಿದ್ದ ಸಭೆಯಲ್ಲಿ ತಂತ್ರಿಗಳಿಂದಲು ಮೇಲು ಸೇತುವೆ ಎತ್ತರದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಹೀಗಿರುವಾಗ ಯೋಜನೆ ಬಗ್ಗೆ ಗೊಂದಲ ಸೃಷ್ಟಿಸುವುದು ಸರಿಯಲ್ಲವೆಂದ ಸತೀಶ್‍ಜೋಯಪ್ಪ ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೇತುವೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕೆಂದು ಒತ್ತಾಯಿಸಿದರು.

ಭಾಗಮಂಡಲ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಯು ಜಟಿಲವಾಗುತ್ತಿದ್ದು, ಅರಣ್ಯ ಇಲಾಖೆ ಅಡ್ಡಿಯಾಗಿದೆ. ತಣ್ಣಿಮಾನಿ ಗ್ರಾಮದ ಸರ್ವೆ ಸಂಖ್ಯೆ 10/1 ರ ಜಾಗದ ಬದಲಾಗಿ ಕೊರಂಗಾಲ ಗ್ರಾಮದ ಸರ್ವೆ ಸಂಖ್ಯೆ 27/2ರಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಜನವಸತಿ ಪ್ರದೇಶದಿಂದ ದೂರವನ್ನು ಕಾಯ್ದುಕೊಂಡು ಕಸವಿಲೇವಾರಿ ಘಟಕವನ್ನು ಶೀಘ್ರ ಆರಂಭಿಸಬೇಕೆಂದರು.

ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳನ್ನು ಪವಿತ್ರ ತೀರ್ಥ ಕ್ಷೇತ್ರಗಳಾಗಿ ಮಾತ್ರ ಪರಿಗಣಿಸುವಂತೆ ಹಾಗೂ ಪ್ರವಾಸಿತಾಣದ ಪಟ್ಟಿಯಿಂದ ಕೈ ಬಿಡುವಂತೆ ಕೊಡಗು ಜಿಲ್ಲಾ ಪಂಚಾಯ್ತ್ ಮಾಡಿರುವ ನಿರ್ಣಯ ಸ್ವಾಗತಾರ್ಹವಾಗಿದೆ. ನಿರ್ಣಯಗಳು ಕೇವಲ ನಿರ್ಣಯವಾಗಿ ಉಳಿಯದೆ ಪ್ರವಾಸೋದ್ಯಮ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಸತೀಶ್ ಒತ್ತಾಯಿಸಿದರು.

ತಲಕಾವೇರಿಯಿಂದ ಭಾಗಮಂಡಲದವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ವಾಹನ ದಟ್ಟಣೆಯನ್ನು ನಿಯಂತ್ರಿಸಬೇಕು. ತಲಕಾವೇರಿಯಲ್ಲಿ ಹೊಟ್ಟೆಪಡಿಗಾಗಿ ಹೊಟೇಲ್ ಹಾಗೂ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ನಡೆಸಲು ಗ್ರಾ.ಪಂ ಅನುಮತಿ ನೀಡಬೇಕೆಂದು ಒತ್ತಾಯಿಸಿದ ಅವರು ಯಾವುದೇ ಕಾರಣಕ್ಕೂ ಬಡ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕುದುಪಜೆ ಪ್ರಕಾಶ್, ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಸೂರ್ತಲೆ ಕಾಶಿ, ಜೆಡಿಎಸ್ ಸ್ಥಾನಿಯ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಅಯ್ಯಂಗೇರಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಯ್ಯುಮುಡಿ ಮನೋಜ್ ಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಪತ್ರಾವೊ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: