ಮೈಸೂರು

ಬೇಸಿಗೆ ದಿನಗಳಲ್ಲಿ ನೀರಿನ ಅಭಾವ ನೀಗಿಸಲು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದ ಡಿ.ರಂದೀಪ್

ಮೈಸೂರು,ಫೆ.2:- ಮೈಸೂರು ಜಿಲ್ಲೆಯಲ್ಲಿ ಅಂತರ್ಜಲ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಜಿಲ್ಲಾ ಅಂತರ್ಜಲ ಸಮಿತಿಯನ್ನು ಕರೆದು ಸಭೆ ನಡೆಸಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಣ್ಣ ನೀರಾವರಿ  ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಮುಂಬರುವ ಬೇಸಿಗೆ ದಿನಗಳಲ್ಲಿ ನೀರಿನ ಅಭಾವ ನೀಗಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದು, ಕ್ರಮಕ್ಕೆ ಸೂಚನೆ ನೀಡಿದರು. ಅಂತರ್ಜಲ ಸಂರಕ್ಷಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಕಾನೂನಿನಲ್ಲಿ ಮಾರ್ಪಾಡು ಮಾಡಲು ಚಿಂತನೆ ನಡೆದಿದೆ. ಹೊಸ ಬಡಾವಣೆಗಳಿಗೆ ಬೋರ್ ಕೊರೆಯಲು ಎಸಿ ಯಿಂದ ಅನುಮತಿ ಪಡೆಯಬೇಕು. ಬೋರ್ ವೆಲ್ ಹೊಂದಿರುವವರು ನೋಂದಣಿ ಕಡ್ಡಾಯವಾಗಿ ಮಾಡಿಸಬೇಕು. ಈಗಾಗಲೆ ಭತ್ತಿ ಹೋಗುತ್ತಿರುವ ಕೆರೆ ಬಾವಿಗಳನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕಾರ್ಯ ವೈಖರಿ ರೂಪಿಸಬೇಕು. ಇದಕ್ಕೆ ಅಧಿಕಾರಿಗಳು ಉತ್ತಮವಾದ ಸಲಹೆಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲವರು ಪರವಾನಿಗೆ ಪಡೆಯದೇ ಲಾರಿ ಟ್ಯಾಂಕರ್ ಗಳಲ್ಲಿ ನೀರನ್ನು ಸಾಗಿಸುತ್ತಾರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು. ಕೊಳವೆಬಾವಿಗಳನ್ನು ಕೆಲವರು ಅನಧಿಕೃತವಾಗಿ ಕೊರೆಸುತ್ತಾರೆ. ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಅಷ್ಟೇ ಅಲ್ಲದೇ 30*40 ಮನೆಗಳ ನಿರ್ಮಾಣ ಹಂತದಲ್ಲೇ ಮಳೆನೀರು ಕೊಯ್ಲು ಕುರಿತು ಯೋಜನೆ ಋಉಪಿಸುವಂತಾಗಬೇಕು. ಮಳೆ ನೀರು ಸಂರಕ್ಷಣೆ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಪಾಲಿಕೆ, ವಾಣಿವಿಲಾಸ ನೀರುಸರಬರಾಜು ಮಂಡಳಿ, ಮೂಡಾ ಆಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: