ಮೈಸೂರು

ಗೋವುಗಳನ್ನು ರಕ್ಷಿಸದಿದ್ದಲ್ಲಿ ಕಣ್ಮರೆಯಾಗುವುದು ನಿಶ್ಚಿತ : ರಾಘವೇಶ್ವರಶ್ರೀ

go-1-webನಮ್ಮನ್ನಾಳುತ್ತಿರುವ ವ್ಯವಸ್ಥೆಯೇ ಇಂದು ಗೋವಂಶದ ನಾಶಕ್ಕೆ ಮುಂದಾಗಿದೆ ಎಂದು ಶಿವಮೊಗ್ಗದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಂಗಲ ಗೋಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ರಾಘವೇಶ್ವರ ಶ್ರೀಗಳು ಮಾತನಾಡಿದರು. ಮೈಸೂರು ಮಹಾರಾಜರಿಂದ ಸಂರಕ್ಷಿತವಾಗಿದ್ದ ಅಮೃತಮಹಲ್ ತಳಿ ಇಂದು ಅಳಿವಿನಂಚಿನಲ್ಲಿದೆ. ಮಹಾರಾಜರ ಕಾಲದಲ್ಲಿ ಹನ್ನೊಂದು ಲೀಟರ್ ಹಾಲು ನೀಡುತ್ತಿದ್ದ ಅಮೃತ ಮಹಲ್ ತಳಿ ಈಗ ಕೇವಲ ಒಂದು ಲೀಟರ್ ಹಾಲು ನೀಡುವ ಪರಿಸ್ಥಿತಿಗೆ ತಲುಪಿದೆ. ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಮೃತಮಹಲ್ ಸಂತತಿ ಇಂದು ಸಾವಿರಗಳಿಗೆ ಇಳಿಕೆ ಕಂಡಿದೆ. ನಾವದನ್ನು ರಕ್ಷಿಸದೇ ಇದ್ದಲ್ಲಿ ಅವು ಕಣ್ಮರೆಯಾಗುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.  ಶ್ರೀರಾಮಚಂದ್ರಾಪುರ ಮಠ ಗೋವುಗಳ ರಕ್ಷಣೆಗೆ ಸಿದ್ಧವಿದೆ. ಭೂಮಿ ಬೇಡ, ಹಣ ಬೇಡ ತಳಿ ರಕ್ಷಣೆಗೆ ಗೋವುಗಳನ್ನು ಬಿಟ್ಟು ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಂದು ರಾಜರು ಗೋರಕ್ಷಣೆ ಮಾಡುತ್ತಿದ್ದರು. ಧರ್ಮ ಇರುವಲ್ಲಿ ರಾಜರು ರಕ್ಷಣೆ ಕೊಡುತ್ತಿದ್ದರು. ಗೋವು ಧರ್ಮದ ಪ್ರತೀಕ. ಹಾಗಾಗಿ ಮೈಸೂರು ರಾಜರು ಗೋವುಗಳನ್ನು ಬಹಳ ಚೆನ್ನಾಗಿ ಪೋಷಿಸಿದ್ದರು. ಇಂದಿನ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳುತ್ತಾರೆ. ಹಾಗಾಗಿ ಗೋರಕ್ಷಣೆ ನಮ್ಮ ಹೊಣೆ. ಹಳ್ಳಿಯವರು ಗೋವನ್ನು ಸಾಕಿದರೆ ನಗರವಾಸಿಗಳು ಗವ್ಯೋತ್ಪನ್ನಗಳನ್ನು ಬಳಸುವ ಮೂಲಕ ಗೋಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಬೇಬಿ ಮಠದ ತ್ರಿನೇತ್ರ ಸ್ವಾಮೀಜಿ ಮಾತನಾಡಿ ನಮಗೆ ಸ್ವಲ್ಪ ಕಷ್ಟವಾದರೆ ನಾವು ಹೋರಾಟ ಮಾಡುತ್ತೇವೆ. ಗೋವು ಇಷ್ಟೊಂದು ಕಷ್ಟ ಅನುಭವಿಸುವಾಗ ಗೋಹತ್ಯೆ ನಿಷೇಧವಾಗಲಿ ಎಂದು ಯಾಕೆ ಹೋರಾಟ ಮಾಡಬಾರದು ಎಂದು ಪ್ರಶ್ನಿಸಿದರಲ್ಲದೇ, ರಾಘವೇಶ್ವರ ಶ್ರೀಗಳು ಆಕ್ರಮಣಗಳ ನಡುವೆಯೂ ಗೋವಿಗಾಗಿ ಆಂದೋಲನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣಾಶ್ರಮದ ಮಹೇಶಾತ್ಮಾನಂದಜೀ, ಹೊಸಮಠದ ಚಿದಾನಂದ ಸ್ವಾಮೀಜಿ, ಇಳೈ ಆಳ್ವಾರ್, ಸಿ.ವಿ.ಕೃಷ್ಣಮೂರ್ತಿ, ರೈತ ಮುಖಂಡ ಬೇಳಗುಳ ಸುಬ್ರಹ್ಮಣ್ಯಂ, ಉದ್ಯಮಿ ಎಸ್.ಕೆ.ಮಿತ್ತಲ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ರಾಮಸ್ವಾಮಿ ವೃತ್ತದಿಂದ ಪ್ರಮುಖ ಮಾರ್ಗಗಳಲ್ಲಿ ಆಕರ್ಷಕ ಮಂಗಲ ಗೋ ಯಾತ್ರಾ ಮೆರವಣಿಗೆ ನಡೆಯಿತು.

Leave a Reply

comments

Related Articles

error: