ಮೈಸೂರು

ಮೋದಿ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ್ದಾರೆ : ಸೂಲಿಬೆಲೆ

solibele-2-webಪ್ರಧಾನಿ ನರೇಂದ್ರ ಮೋದಿ 500,1000ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡುವ ಮೂಲಕ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ್ದಾರೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಯುವ ಬ್ರಿಗೇಡ್ ಹಾಗೂ ನಮ್ಮ ಮೈಸೂರು ಫೌಂಡೇಶನ್ ಸಹಯೋಗದಲ್ಲಿ ನೋಟು ನಿಷೇಧದ ಹಿನ್ನೆಲೆಯಲ್ಲಿ ಆಯೋಜಿಸಲಾದ  ಬ್ಲಾಕ್ ಆ್ಯಂಡ್ ವೈಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

500 ಹಾಗೂ 1000ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದು ಕಾಳಧನಿಕರಲ್ಲಿ ನಡುಕ ಹುಟ್ಟಿಸಿದೆ. ಕಾಳಧನಿಕರನ್ನು ರಕ್ಷಿಸಲು ಕೆಲವು ನಾಯಕರು ಶತಾಯಗತಾಯ ಪ್ರಯತ್ನಪಡುತ್ತಿದ್ದಾರೆ. ಕಾಳಧನಿಕರ ವಿರುದ್ಧ ಸಮರ ಸಾರಿರುವ ಮೋದಿಯವರಿಗೆ ಸಾರ್ವಜನಿಕರು ಅಧಿಕ ಪ್ರಮಾಣದಲ್ಲಿ ಬೆಂಬಲ ನೀಡಬೇಕು ಎಂದರು.

ಕಪ್ಪು ಹಣವನ್ನು ವಿದೇಶಕ್ಕೆ ಸಾಗಿಸುವ ಹವಾಲಾ ಏಜೆಂಟ್ಗಳು ಈ ಯೋಜನೆಯಿಂದ ಕಂಗಾಲಾಗಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 5ರಿಂದ 6ಕೋಟಿ ಕಪ್ಪು ಹಣ ಸರ್ಕಾರದ ಬೊಕ್ಕಸ ಸೇರುವುದು ಖಂಡಿತ ಸಾಧ್ಯವಿದೆ. ಕಾಳಧನ ಉಳ್ಳವರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಆಗಿದೆಯೇ ಹೊರತು ಮತ್ತೆ ಯಾರಿಗೂ ತೊಂದರೆಯಾಗಿಲ್ಲ  ಎಂದು ತಿಳಿಸಿದರು.

ಸರ್ಕಾರ ಸಾರ್ವಜನಿಕರಿಗೆ ವಿಧಿಸುವ ಎಲ್ಲ ವಿಧದ ತೆರಿಗೆಗಳನ್ನು ನಿಲ್ಲಿಸಿದರೆ ದೇಶದಲ್ಲಿ ಪ್ರಾಮಾಣಿಕರ ಸಂಖ್ಯೆ ಹೆಚ್ಚುತ್ತದೆ. ನಮಗೆ ತಿಳಿಯದಂತೆ ಸರ್ಕಾರ ನಮ್ಮಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುತ್ತಿದೆ. ಇದರಿಂದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ಸಂಗ್ರಹಿಸಿಟ್ಟರೆ ತೆರಿಗೆ ಕಟ್ಟಬೇಕೆನ್ನುವ ಭಯದಿಂದ ಅಕ್ರಮವಾಗಿ ಹಣವನ್ನು ಬಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅಪ್ರಾಮಾಣಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ದಿನೇಶ್, ಯುವ ಬ್ರಿಗೇಡ್ ಸಂಪರ್ಕಾಧಿಕಾರಿ ಮಂಜುನಾಥ್, ಸದಸ್ಯ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: