ಮೈಸೂರು

ಜೀವನ ನಿರ್ವಹಿಸಲು ಕಲಿಸುವ ಶಿಕ್ಷಣ ಸಂಸ್ಥೆಗಳು ದೇವಸ್ಥಾನಕ್ಕಿಂತಲೂ ಶ್ರೇಷ್ಠ : ಹೆಚ್.ಎ.ವೆಂಕಟೇಶ್

ಮೈಸೂರು ,ಫೆ.2:- ಅಕ್ಷರ ಜ್ಞಾನ ಪಡೆದು ವ್ಯಕ್ತಿತ್ವ ರೂಪಿಸಿ ಜೀವನ ನಿರ್ವಹಿಸಲು ಕಲಿಸುವ ಶಿಕ್ಷಣ ಸಂಸ್ಥೆಗಳು ದೇವಸ್ಥಾನಕ್ಕಿಂತಲೂ ಶ್ರೇಷ್ಠ ಎಂದು ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ತಿಳಿಸಿದರು.

ಜೆಎಸ್ ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಸೆಮಿನಾರ್ ಹಾಲ್ ನಲ್ಲಿ ವಿಶ್ವವಿಶೇಷಚೇತನರ ದಿನಾಚರಣೆ, ಲೂಯಿಸ್ ಬ್ರೈಲ್ ಜನ್ಮ ದಿನಾಚರಣೆ ಮತ್ತು ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇರಬಹುದು, ವಿಕಲಚೇತನರ ಕಲ್ಯಾಣ ಇಲಾಖೆ ಇರಬಹುದು ಇಲ್ಲಿ ಕೆಲಸ ಮಾಡುವವರು ಸಂಬಳಕ್ಕೆ  ಕೆಲಸ ಮಾಡದೇ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು.  ಸೇವಾ ಮನೋಭಾವನೆ ಇರುವಂಥವರು ಮಾತ್ರ ಇಂತಹ ಇಲಾಖೆಗಳಲ್ಲಿ ಕೆಲಸ ಮಾಡಲು ಸಾಧ್ಯ. ನೀರಿನ ಘಟಕ ಅಳವಡಿಸಿ ನಮ್ಮ ಸಂಸ್ಥೆಯಿಂದ ಮಾಡಿರುವ ಹೃದಯ ತಟ್ಟತಕ್ಕಂತಹ ಕಾರ್ಯಕ್ರಮ ತೃಪ್ತಿ ತಂದಿದೆ. ಸಾರ್ಥಕ ಮನೋಭಾವನೆ ಉಂಟಾಗಿದೆ ಎಂದರು. ಸರ್ಕಾರ ನೀಡಿದ ಹಣಗಳು ಅವಶ್ಯವಿರುವವರಿಗೆ ಸದ್ಬಳಕೆಯಾಗಬೇಕು. ನೀರಿನ ಘಟಕ ಸ್ಥಾಪಿಸಿರುವುದು ಸಂಸ್ಥೆಗೆ ಹೆಮ್ಮೆ ತರುವ ವಿಷಯ. ಸರ್ಕಾರದ ನಿಯಮದ ಪ್ರಕಾರವೇ ಹಣ ಹಂಚಬೇಕು. ಹಣ ಹಂಚುವಾಗಲು ನಮಗೆ ಒತ್ತಡ ಇರಲಿದೆ. ಯಾರಿಗೆ, ಏತಕ್ಕಾಗಿ ಮಾಡಬೇಕು ಎಂಬ ಪ್ರಶ್ನೆಗಳು ಏಳಲಿದೆ. ಈಗ ನೀರಿನ ಘಟಕ ಸ್ಥಾಪಿಸುವ ಮೂಲಕ ವಿಶೇಷಚೇತನರಿಗೆ ಆರೋಗ್ಯದ ದೃಷ್ಟಿಯಿಂದ ಸಹಾಯ ಮಾಡಿದ್ದೇವೆ. ಇತರ ಸಂಘಸಂಸ್ಥೆಗಳೂ ಕೂಡ  ಇಂತಹುದಕ್ಕೆ ಹೆಚ್ಚು ಸಹಾಯ ಮಾಡಬೇಕು. ವಿಶೇಷ ಚೇತನರು ಯಾವುದೇ ರೀತಿಯಲ್ಲಿಯೂ ಕಡಿಮೆ ಇಲ್ಲ. ಅವರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು.ಜೆಎಸ್ ಎಸ್ ವಿದ್ಯಾಸಂಸ್ಥೆ ಮೊದಲ ಬಾರಿಗೆ ಇಂತಹ ತಾಂತ್ರಿಕ ಶಿಕ್ಷಣ ಸಂಸ್ಥೆ ತೆರೆದು ನೈಪುಣ್ಯತೆ ನೀಡಿ ಬದುಕಿಗೆ ಒಂದು ಹೊಸ ಚಿತ್ರಣ ನೀಡಿದೆ.  ಜೆಎಸ್ ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಸಂಸ್ಥೆ  ಶಿಕ್ಷಣಕ್ಕೆ, ಅನ್ನದಾಸೋಹಕ್ಕೆ, ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ತನ್ನದೇ ಆದ ಕೊಡುಗೆ ನೀಡಿದೆ. ಎಲ್ಲಿ ನಾವು ಅಕ್ಷರ ಜ್ಞಾನ ಪಡೆದುಕೊಳ್ಳುತ್ತೇವೆಯೋಅಲ್ಲಿ ವ್ಯಕ್ತಿತ್ವವನ್ನು ರೂಪಿಸಿ ಜೀವನ ನಿರ್ವಹಿಸಲು ಕಲಿಯುತ್ತೇವೆ. ಅದು ದೇವಸ್ಥಾನಕ್ಕಿಂತಲೂ ಶ್ರೇಷ್ಠ ಎಂದರು. ಸುತ್ತೂರು ಶ್ರೀಗಳು ದೂರದೃಷ್ಟಿಯುಳ್ಳವರು. ಮನುಕುಲದ ಉದ್ಧಾರಕ್ಕೋಸ್ಕರ  ಶಿಕ್ಷಣ ಸಂಸ್ಥೆ ತೆರೆದಿದ್ದಾರೆ ಎಂದರು. ಸಮಾಜದಲ್ಲಿ ತಮ್ಮದಲ್ಲದ ತಪ್ಪಿಗೆ ಯಾವುದೋ ವಿಕಲಚೇತನರಾಗಿ ಹುಟ್ಟಿದ ತಕ್ಷಣ ಜೀವನ ಕ್ಷಣಿಕವಲ್ಲ. ಅವರ ಬದುಕೂ ಕೂಡಶ್ರೇಷ್ಠವೇ. ಭಗವಂತ ಅವರಿಗೂ ಶಕ್ತಿ ನೀಡಿರುತ್ತಾನೆ. ಅವರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೇಂಟ್ ಆ್ಯಂಡ್ ವಾರ್ನಿಷ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಶೇಖರ ದೊಡ್ಡಮನಿ, ಜೆಎಸ್ ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್, ಪ್ರಾಂಶುಪಾಲ ನಂಜುಂಡಸ್ವಾಮಿ, ಸಹಪ್ರಾಧ್ಯಾಪಕಿ ನಿರುಪಮಾ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: