ಕರ್ನಾಟಕ

ಮುಂದಿನ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತ : ಸಿ.ಎಸ್.ಪುಟ್ಟರಾಜು ವಿಶ್ವಾಸ

ರಾಜ್ಯ(ಮಂಡ್ಯ)ಫೆ.3:- ಪಾಂಡವಪುರ ಪಟ್ಟಣದಲ್ಲಿ ಫೆ.9 ರಂದು ನಡೆಯುವ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅಂದೇ ಮುಂದಿನ ಚುನಾವಣೆಯ ಗೆಲುವಿನ ನಿರ್ಧಾರ ಮಾಡಬೇಕು ಎಂದು ಸಂಸದ ಸಿ.ಎಸ್.ಪುಟ್ಟರಾಜು ಕರೆ ನೀಡಿದರು.

ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಕೆ.ಬೆಟ್ಟಹಳ್ಳಿ ಗ್ರಾಪಂ ಹಾಗೂ ಲಕ್ಷ್ಮೀಸಾಗರ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕುಮಾರಪರ್ವ ಕಾರ್ಯಕ್ರಮದ ಅಂಗವಾಗಿ ಮೇಲುಕೋಟೆಯಿಂದ ಪಾಂಡವಪುರ ಪಟ್ಟಣದವರೆಗೆ ನಡೆಯುವ ಬೈಕ್ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮುಂದಿನ ಚುನಾವಣೆಯ ಗೆಲುವಿನ ಸಂದೇಶ ಅದೇ ರವಾನೆಯಾಗಬೇಕು ಎಂದು ಕಾರ್ಯಕರ್ತರಿಗೆ ಉರಿದುಂಬಿಸಿದರು.

ರಾಜ್ಯದಲ್ಲಿ ಈಗಾಗಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕೆಂಬ ಪರ್ವ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಸೂರ್ಯ ಹೇಗೆ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಮುಂದೆ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಕೂಡ ಅಷ್ಟೇ ಸತ್ಯ ಎಂದರು.

ಕಳೆದ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನಗೆ ಹೆಚ್ಚಿನ ರೀತಿಯಲ್ಲಿಯೇ ಆಶೀರ್ವಾದ ಮಾಡಿದ್ದಾರೆ. ನನ್ನನ್ನು ಸೋಲಿಸಲೆಬೇಕೆಂದು ಕೆಲವು ಸಂಚು ರೂಪಿಸಿದ್ದರಿಂದಾಗಿ ನನ್ನಗೆ ಸೋಲುಂಟಾಯಿತು ಅಷ್ಟೆ. ಆದರೆ, ಮುಂದಿನ ಚುನಾವಣೆಯಲ್ಲಿ ಇದ್ಯಾವುದೇ ಆಟ ನಡೆಯೋದಿಲ್ಲ. ನನ್ನ ಸೋಲಿನಿಂದಾದಗಿ ಕ್ಷೇತ್ರ ಎಷ್ಟರ ಮಟ್ಟಿಗೆ ಅಭಿವೃದ್ದಿಯಾಗಿದೆ ಎನ್ನುವುದು ಕಳೆದ ಬಾರಿ ನನ್ನುನ್ನು ಸೋಲಿಸಿದವರಿಗೆ ಇದೀಗ ಅರಿವಾಗಿದ್ದು ಮುಂದಿನ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಪಕ್ಷಗಳು ಹೊಂದಾಣಿಕೆಯೊಂದಿಗೆ ಚುನಾವಣೆ ಎದುರಿಸಲಿವೆ ಎಂದು ಹೇಳಿದರು.

ಇದೇವೇಳೆ ಕೆ.ಬೆಟ್ಟಹಳ್ಳಿ, ವಡ್ಡರಹಳ್ಳಿ, ಮಂಡಿಬೆಟ್ಟಹಳ್ಳಿ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತಸಂಘದ ಕಾರ್ಯಕರ್ತರು ಪುಟ್ಟರಾಜು ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಸಭೆಯಲ್ಲಿ ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲರಾಮಕೃಷ್ಣ, ಅನುಸೂಯದೇವರಾಜು, ತಾಪಂ ಅಧ್ಯಕ್ಷೆ ಪೂರ್ಣಿಮಾವೆಂಕಟೇಶ್, ಮಾಜಿ ಅಧ್ಯಕ್ಷೆ ರಾಧಮ್ಮಕೆಂಪೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: